ಕೆ.ಆರ್.ಪೇಟೆ-ಕರೋಟಿ ಸರಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿದು ಮಹನೀಯರ ಚಿತ್ರಗಳ ಬರೆದು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದ ‘ಭರವಸೆ ಟ್ರಸ್ಟ್’

ಕೆ.ಆರ್.ಪೇಟೆ-ತಾಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ “ಭರವಸೆ ಟ್ರಸ್ಟ್” ಪದಾಧಿಕಾರಿಗಳು ಸುಣ್ಣ-ಬಣ್ಣ ಹಾಗೂ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರ ಭಾವಚಿತ್ರ ಮೂಡಿಸಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.

ಭರವಸೆ ಬಳಗದ ಪ್ರಮುಖ ಸದಸ್ಯ ಸುನಿಲ್ ಗೌಡ ಮಾತನಾಡಿ,ನಮ್ಮ ಭರವಸೆ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಅಳಿಲು ಕಾಯಕವನ್ನು ರಾಜ್ಯಾದ್ಯಂತ ನೆರವೇರಿಸುತ್ತಿದ್ದೇವೆ. ಅದರಂತೆ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಶಂಕರ್ ನಾಗ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಯ ಉಳಿವಿಗಾಗಿ ಕರೋಟಿ ಗ್ರಾಮದ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣವನ್ನು ಮಾಡಿ ಅಂದಗೊಳಿಸಿದ್ದೇವೆ ಎಂದರು.

ಬಳಿಕ ಮಾತನಾಡಿ ಶಾಲಾ ಮುಖ್ಯ ಶಿಕ್ಷಕ ಮಂಜೇಗೌಡ, ಸರ್ಕಾರದ ಜೊತೆಗೆ ಸಮಾಜ ಸೇವಕರು, ಭರವಸೆ ಟ್ರಸ್ಟ್ ನಂತಹ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ.ಈಗ ಖಾಸಗಿ ಶಾಲೆಗಿಂತ ನಮ್ಮ ಸರ್ಕಾರಿ ಶಾಲೆಯೇನು ಕಡಿಮೆ ಇಲ್ಲ ಎನ್ನುವಂತೆ ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭರವಸೆ ಟ್ರಸ್ಟ್. ಸದಸ್ಯರು ಸ್ವಯಂಪ್ರೇರಿತವಾಗಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಮೂಲಕ ಶಿಕ್ಷಣ ಕಲಿಯಬೇಕು ಎನ್ನುವ ಮಕ್ಕಳ ಉತ್ಸಾಹಕ್ಕೆ ಉತ್ತೇಜನ ನೀಡಿದ್ದಾರೆ ಎಂದು ತಿಳಿಸಿದರು.

ಗ್ರಾಮದ ಮುಖಂಡ ಪುಟ್ಟೇಗೌಡ ಮಾತನಾಡಿ, ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಳೆಯ ಕಟ್ಟಡ ಕಳೆದ 15 ವರ್ಷದಿಂದ ಸುಣ್ಣಬಣ್ಣ ಕಾಣದೇ ಹಳೆಯ ಭೂತ ಮನೆಯಂತೆ ಇತ್ತು.

ಭರವಸೆಯ ಸದಸ್ಯರು ಹಾಗೂ ಕಲಾವಿದರು 2 ದಿನಗಳ ಕಾಲ ಶಾಲೆಗೆ ಸುಣ್ಣ ಬಣ್ಣ ಬಳಿದು ನಮ್ಮ ಸರ್ಕಾರಿ ಶಾಲೆಗೆ ಹೊಸ ವಿನ್ಯಾಸ ನೀಡಿದ್ದಾರೆ ಎಂದರು.

“ಭರವಸೆ ಟ್ರಸ್ಟ್” ಪದಾಧಿಕಾರಿಗಳಿಗೆ, ಕರೋಟಿ ಗ್ರಾಮಸ್ಥರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಸನ್ಮಾನಿಸುವ ಮುಖಾಂತರ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಎನ್.ಜಿ.ಓ ಭರವಸೆ ಟ್ರಸ್ಟ್ ನ ಪ್ರಮುಖ ಸದಸ್ಯರುಗಳಾದ ಅನುಷಾ, ಸುನಿಲ್,ಮಂಜೇಶ್, ಅಭಿಷೇಕ್, ಯೋಗೇಶ್, ಆರ್ಶಿತ್, ಪೂಜಾ, ಮನೀಶ್,ನಿಷತ್, ಗ್ರಾ.ಪಂ ಸದಸ್ಯ ಕರೋಟಿ ಅನಿಲ್, ಶಾಲೆ ಮುಖ್ಯ ಶಿಕ್ಷಕ ಮಂಜೇಗೌಡ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್, ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಪುಟ್ಟೇಗೌಡ, ಅಂಗಡಿ ರಮೇಶ್, ಅಂಗನವಾಡಿ ಕಾರ್ಯಕರ್ತೆ, ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಉಪಸ್ಥಿತರಿದ್ದರು.

——————-–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?