ಕೆ.ಆರ್.ಪೇಟೆ- ಕತ್ತರಘಟ್ಟ ದೌರ್ಜನ್ಯ ಪ್ರಕರಣ-ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಶಿವರಾಂ ಭೇಟಿ – ದಲಿತ ಕುಟುಂಬಕ್ಕೆ ನೆರವು

ಕೆ.ಆರ್.ಪೇಟೆ: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯ ದೌರ್ಜನ್ಯ-ದಬ್ಬಾಳಿಕೆಗೆ ಒಳಗಾಗಿ ಸಜೀವ ದಹನ ಹತ್ಯೆಯಾದ ದಲಿತ ವ್ಯಕ್ತಿ ಜಯಕುಮಾರ್ ಮನೆಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ.ಕೆ.ಶಿವರಾಂ ಅವರು ಬೇಟಿ ನೀಡಿ ಮಹಾಸಭಾ ವತಿಯಿಂದ ಪರಿಹಾರ ನೀಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ವಾಣಿ.ಕೆ.ಶಿವರಾಂ ಅವರು ಸ್ವಾತಂತ್ರ್ಯ ಬಂದು ಸುಮಾರು 78ವರ್ಷಗಳು ಕಳೆಯುತ್ತಾ ಬಂದಿದ್ದರೂ ಸಹ ದಲಿತರ ಮೇಲೆ ಸವರ್ಣೀಯರಿಂದ ದೌರ್ಜನ್ಯ-ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದಲಿತರಿಗೆ ಕಾನೂನಿನ ರಕ್ಷಣೆ ನೀಡಿದರೂ ಸಹ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಇದಕ್ಕೆ ನಮ್ಮ ದಲಿತ ಬಂಧುಗಳಲ್ಲಿನ ಸಂಘಟನೆಯ ಕೊರತೆಯೇ ಕಾರಣವಾಗಿದೆ. ನಮ್ಮ ದಲಿತ ಬಂಧುಗಳು ಸಂಘಟಿತರಾಗಿ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕು. ಸಂವಿಧಾನ ಬದ್ದವಾಗಿ ದಲಿತ ಬಂಧುಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕತ್ತರಘಟ್ಟ ಗ್ರಾಮದಲ್ಲಿ ನಮ್ಮ ಜಯಕುಮಾರ್ ಎಂಬುವವರು ಸ್ವಾಧೀನಾನುಭದಲ್ಲಿದ್ದ ಭೂಮಿಯನ್ನು ಅನಿಲ್‌ಕುಮಾರ್ ಎಂಬಾತ ಕಿತ್ತುಕೊಳ್ಳುವ ದುರುದ್ದೇಶದಿಂದ ಹುಲ್ಲಿನ ಮೆದೆ ಹಾಕಿಕೊಂಡು ತೊಂದರೆ ಕೊಡುತ್ತಾ, ನಂತರ ಬೆಂಕಿಗೆ ತಳ್ಳಿ ಜೀವಂತವಾಗಿ ಹತ್ಯೆ ಮಾಡಿರುವ ಸವರ್ಣೀಯ ವ್ಯಕ್ತಿ ಅನಿಲ್ ಕುಮಾರ್ ಎಂಬಾತನನ್ನು ಕೂಡಲೇ ಬಂಧಿಸಬೇಕು. ಘಟನೆಯನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕು. ಹತ್ಯೆಯಾದ ಜಯಕುಮಾರ್ ಕುಟುಂಬಕ್ಕೆ ಕನಿಷ್ಠ 50ಲಕ್ಷ ರೂ ಪರಿಹಾರ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಅವರು ಸ್ವಾಧೀನದಲ್ಲಿರುವ ಭೂಮಿಯನ್ನು ದರಖಾಸ್ತು ಕಮಿಟಿ ಮೂಲಕ ಮಂಜೂರು ಮಾಡಿ ಕೊಡಬೇಕು.

ಮೃತನ ಪತ್ನಿ ಲಕ್ಷ ಸರ್ಕಾರಿ ಉದ್ಯೋಗ ನೀಡಬೇಕು. ಇದೇ ರೀತಿ ತಾಲ್ಲೂಕಿನಾ ದ್ಯಂತ ದಲಿತ ಬಂಧುಗಳು ಸ್ವಾಧೀನದಲ್ಲಿದ್ದು ಬೇಸಾಯ ಮಾಡಿಕೊಂಡು ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಭೂಮಕಯನ್ನು ಮಂಜೂರು ಮಾಡಿಕೊಡಬೇಕು. ದಲಿತ ಭೂಮಿಯನ್ನು ಬಲಾಢ್ಯರು ಅತಿಕ್ರಮಿಸಿಕೊಳ್ಳದಂತೆ ತಾಲ್ಲೂಕು ಆಡಳಿತವು ನೋಡಿಕೊಳ್ಳಬೇಕು ಎಂದು ವಾಣಿ ಶಿವರಾಂ ಸರ್ಕಾರವನ್ನು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಲೋಕಜನಶಕ್ತಿ ಪಕ್ಷ ಹಾಗೂ ದಲಿತ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಛಲವಾದಿ ಮಹಾಸಭಾ ರಾಜ್ಯ ಖಜಾಂಚಿ ಮೈಕೋ ನಾಗರಾಜ್, ಛಲವಾದಿ‌ ಮಹಾಸಭಾ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಮಾಂಬಹಳ್ಳಿ ಜಯರಾಂ, ಮಂಡ್ಯ ಜಿಲ್ಲಾ ಛಲವಾದಿ‌ ಮಹಾಸಭಾ ಅಧ್ಯಕ್ಷ ಸುರೇಶ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ಮುದುಗೆರೆ‌ ಮಹೇಂದ್ರ, ಹರಿಹರಪುರ ನರಸಿಂಹ, ಬೂಕನಕೆರೆ ತಮ್ಮಯ್ಯ, ಪವಿಕುಮಾರ್, ಕಳ್ಳನಕೆರೆ ಶಂಕರ್, ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ದಲಿತ ಮುಖಂಡ ಬಸ್ತಿ ರಂಗಪ್ಪ, ದಲಿತ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಾಕ್ಷಿನಾಗರಾಜು, ತಾಲ್ಲೂಕು ದಲಿತ ಸೇನೆ ಅಧ್ಯಕ್ಷ ಚೌಡೇನಹಳ್ಳಿ ದೇವರಾಜು ಸೇರಿದಂತೆ ಹಲವು ದಲಿತ ಸಂಘಟನೆಗಳ ಮುಖಂಡರು, ಛಲವಾದಿ ಮಹಾಸಭಾ ಕಾರ್ಯಕರ್ತರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *