ಕೆ.ಆರ್.ಪೇಟೆ-ಕತ್ತರಘಟ್ಟ ಸಜೀವ ದಹನ ಪ್ರಕರಣ-ನೊಂದ ದಲಿತ ಕುಟುಂಬಕ್ಕೆ 1ಕೋಟಿ ಪರಿಹಾರ ನೀಡಲು ದಲಿತ ಸೇನೆ ರಾಜ್ಯಾಧ್ಯಕ್ಷ ಎಸ್.ಎಂ.ಜಗನ್ನಾಥ್ ಆಗ್ರಹ

ಕೆ.ಆರ್.ಪೇಟೆ,ಮೇ.24: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯೊಬ್ಬ ದಲಿತ ಯುವಕ ಜಯಕುಮಾರ್ ಎಂಬುವವರನ್ನು ಉರಿಯುವ ಬೆಂಕಿಗೆ ತಳ್ಳಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಯನ್ನು ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ನೊಂದ ಕುಟುಂಬಕ್ಕೆ ಸರ್ಕಾರವು ಕನಿಷ್ಠ 1ಕೋಟಿ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು.

ಸವರ್ಣೀಯರಿಂದ ನೊಂದ ದಲಿತರ ಯಾವುದೇ ದೂರುಗಳು ಬಂದರೂ ಪೊಲೀಸರು ತಕ್ಷಣ ಎಫ್.ಐ.ಆರ್. ದಾಖಲಿಸಿ ದಲಿತರಿಗೆ ರಕ್ಷಣೆ ನೀಡಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿ ಜೀವಂತ ದಹನದಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಲೋಕ ಜನ ಶಕ್ತಿ ಪಕ್ಷ ಹಾಗೂ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಎಸ್.ಎಂ.ಜಗನ್ನಾಥ್ ಸರ್ಕಾರವನ್ನು ಒತ್ತಾಯ ಮಾಡಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ಎಂಬಾತನ ದೌರ್ಜನ್ಯದಿಂದ ಜೀವಂತ ದಹನವಾದ ಸ್ಥಿತಿಯಲ್ಲಿ ಬರ್ಬರ ಹತ್ಯೆಯಾದ ದಲಿತ ಯುವಕ ಜಯಕುಮಾರ್ ಅವರ ನಿವಾಸಕ್ಕೆ ಬೇಟಿ ನೀಡಿ 50ಸಾವಿರ ರೂಪಾಯಿಗಳ ಪರಿಹಾರವನ್ನು ನೀಡಿ ಸಾಂತ್ವನ ಹೇಳಿ, ನಂತರ ಸಜೀವ ದಹನದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಹತ್ತಾರು ವರ್ಷಗಳಿಂದ ಜಮೀನಿನಲ್ಲಿ ಸ್ವಾಧೀನದಲ್ಲಿರುವ ದಲಿತ ಜಯಕುಮಾರ್ ಕುಟುಂಬಕ್ಕೆ ಸೇರಿದ ಜಮೀನನ್ನು ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ಎಂಬಾತ ಕಬಳಿಸುವ ಹುನ್ನಾರದಿಂದ ಹುಲ್ಲಿನ ಮೆದೆಯನ್ನು ಹಾಕಿ ಪದೇ ಪದೇ ತೊಂದರೆ ಕೊಡುತ್ತಿದ್ದನು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸಹ ಸೂಕ್ತ ಕ್ರಮ ಕೈಗೊಳ್ಳದೇ ಇರುವುದೇ ಜಯಕುಮಾರ್ ಹತ್ಯೆಗೆ ಪ್ರಮುಖ ಕಾರಣವಾಗಿದೆ. ಕೂಡಲೇ ಆರೋಪಿ ಅನಿಲ್‌ಕುಮಾರನನ್ನು ಬಂಧಿಸಬೇಕು. ಆತ ಮೇಲ್ವರ್ಗಕ್ಕೆ ಸೇರಿದವನಾಗಿರುವ ಕಾರಣ ಆತನನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.

ನೊಂದ ಮಹಿಳೆಯ ಹೇಳಿಕೆಯನ್ನು ತಿರುಚಿ, ಆಕೆ ಕೊಟ್ಟ ದೂರನ್ನು ಸ್ವೀಕರಿಸದೇ, ಬೇರೆಯದೇ ದೂರು ಪಡೆದು ಬರ್ಬರ ಕೊಲೆಯನ್ನು ಆತ್ಮಹತ್ಯೆ ಎಂದು ಪೊಲೀಸರು ಎಫ್.ಐ.ಆರ್ ದಾಖಲಿಸುವ ಮೂಲಕ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಪ್ರಾಮಾಣಿಕವಾದ ತನಿಖೆಯನ್ನು ಬೇರೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಂದ ಮಾಡಿಸಿ, ಘಟನೆಗೆ ನಿಖರವಾದ ಕಾರಣವನ್ನು ಕಂಡು ಹಿಡಿಯಬೇಕು. ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮೃತ ಜಯಕುಮಾರ್ ಹೋಟೆಲ್‌ನಲ್ಲಿ ಕೂಲಿ ಮಾಡಿಕೊಂಡು ತಮ್ಮ ಸಂಸಾರ ನಿರ್ವಹಣೆ ಮಾಡುತ್ತಿದ್ದನು. ಆದರೆ ಈಗ ಮನೆಯ ಯಜಮಾನನ್ನು ಕಳೆದುಕೊಂಡು ಪತ್ನಿ ಹಾಗೂ ಎರಡು ಪುಟ್ಟ ಮಕ್ಕಳು ಬೀದಿ ಪಾಲಾಗಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗೆ ಸರ್ಕಾರವು ಕನಿಷ್ಠ 1ಕೋಟಿ ರೂಪಾಯಿಗಳನ್ನು ಜಯಕುಮಾರ್ ಪತ್ನಿ ಲಕ್ಷ್ಮೀ ಅವರಿಗೆ ಪರಿಹಾರವಾಗಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಲ್ಲಿ ಜಗನ್ನಾಥ್ ಮನವಿ ಮಾಡಿದರು.

ಇದೇ ಮೇ.27ರಂದು ಕತ್ತರಘಟ್ಟ ಖಂಡಿಸಿ ದಲಿತ ಪರ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ ದಲಿತ ಸೇನೆ ಹಾಗೂ ಲೋಕಜನಶಕ್ತಿ ಪಕ್ಷವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ನಮ್ಮ ದಲಿತ ಸೇನೆಯ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ತಾಲ್ಲೂಕು ಅಧ್ಯಕ್ಷ ಚೌಡೇನಹಳ್ಳಿ ದೇವರಾಜು ನೇತೃತ್ವದಲ್ಲಿ ಸಂಪೂರ್ಣ ಬೆಂಬಲವನ್ನು ನೀಡಿ ನಮ್ಮ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಗನ್ನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ದಲಿತ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಕಮಲಾಕ್ಷೀನಾಗರಾಜು, ತಾಲ್ಲೂಕು ದಲಿತ ಸೇನೆ ಅಧ್ಯಕ್ಷ ಚೌಡೇನಹಳ್ಳಿ ದೇವರಾಜು, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಲೋಕಜನಶಕ್ತಿ ಪಕ್ಷದ ಮಂಡ್ಯ ಜಿಲ್ಲಾ ಅಧ್ಯಕ್ಷ ಸತೀಶ್, ರಾಜ್ಯ ದಲಿತ ಸೇನೆಯ ರಾಜ್ಯ ಗೌರವಾಧ್ಯಕ್ಷ ಬಾಲಾಜಿ, ರಾಜ್ಯ ಉಪಾಧ್ಯಕ್ಷ ಶಂಕರ್ ರೆಡ್ಡಿ, ಮುಖಂಡರಾದ ಅಶೋಕ್, ರಾಕೇಶ್‌ಶರ್ಮ, ತಾಲ್ಲೂಕು ದಲಿತ ಸೇನೆಯ ಮುಖಂಡರಾದ ನಾಗರಾಜು, ಶಂಭುಲಿಂಗಯ್ಯ, ಬೋಳಮಾರನಹಳ್ಳಿ ಕುಮಾರ್, ಸುಜಾತ, ಕಳ್ಳನಕೆರೆ ಶಂಕರ್, ಡಿಎಸ್.ಎಸ್. ಜಿಲ್ಲಾ ಸಂಘಟನಾ ಸಂಚಾಲಕ ಕತ್ತರಘಟ್ಟ ರಾಜೇಶ್, ಸುನಿಲ್ ಸೇರಿದಂತೆ ಹಲವಾರು ಮಂದಿ ದಲಿತ ಸೇನೆಯ ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *