ಕೆ.ಆರ್.ಪೇಟೆ-ಸಮಕಾಲೀನ ಸಮಸ್ಯೆ ಮತ್ತು ಕಣ್ಣೆದುರು ನಡೆಯುವ ಘಟನೆಗಳಿಗೆ ಧ್ವನಿಯಾಗುವಂತಹ ಹಾಗೂ ಸಮಾಜ ತಿದ್ದುವ ಕವಿತೆಗಳನ್ನು ರಚಿಸುವಂತೆ ಹಿರಿಯ ರಂಗಕರ್ಮಿ ಮತ್ತು ಸಾಹಿತಿ ಕಿಕ್ಕೇರಿ ಕೆ.ಜೆ.ನಾರಾಯಣ್ ಅವರು ಸಾಹಿತಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಗ್ರಾಮ ಭಾರತಿ ವಿದ್ಯಾಸಂಸ್ಥೆಯ ಎಸ್.ಸಿ.ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದ ವತಿಯಿಂದ ಭಾನುವಾರ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಅಂತರ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಭಾಷೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಹೊಂದಿದೆ. ಕನ್ನಡ ಸಾಹಿತ್ಯ ಪರಂಪರೆ ದೊಡ್ಡದಾಗಿದೆ. ಆದಿ ಕವಿ ಪಂಪನಿoದ ಕುವೆಂಪು ವರೆವಿಗಿನ ಸಾಹಿತ್ಯ ಪ್ರಜ್ಞೆ ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಭಿನ್ನವಾಗಿ ಹರಿದುಬಂದಿದೆ. ಹಾಗಾಗಿ ಕನ್ನಡದಲ್ಲಿ ಕವಿತೆ ಬರೆಯುವ ಕವಿಗಳು ಈ ಪೂರ್ವಸೂರಿಗಳ ಬಗ್ಗೆ, ಅವರ ಕೃತಿಗಳ ಅಧ್ಯಯನ ಮಾಡಬೇಕು. ಕವಿತೆಗಳು ಭಾವನೆಗಳ ಪ್ರತಿಬಿಂಬವಾಗಿದ್ದು ಬರೆಯುವ ಕವಿತೆ ಸಮಾಜಕ್ಕೆ ಉತ್ತಮಸಂದೇಶ ಸಾರುವಂತಿರಬೇಕೇ ವಿನಃ ಪ್ರಚೋಧನೆ ಮಾಡುವಂತೆ ಇರಬಾರದು. ಸಾಮರಸ್ಯ ಸಂದೇಶ ಸಾರಬೇಕು.ಸ್ವಾಸ್ತ್ಯ ಸಮಾಜದ ನಿರ್ಮಾಣದ ಕನಸು ಕವಿತೆಗಳಲ್ಲಿ ಇರಬೇಕು ಎಂದರು.
ಸಮಾರಂಭವನ್ನು ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಉದ್ಘಾಟಿಸಿ ಸಮಾಜಮುಖಿ ಕವಿತೆಗಳ ರಚನೆಗೆ ಕವಿಗಳು ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಕವಿಗೋಷ್ಟಿಗೆ ಚಾಲನೆ ನೀಡಿದ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಸಾಹಿತ್ಯ ಪರಂಪರೆಯಲ್ಲಿ ಕವಿತೆಗಳ ಪಾತ್ರ ಮಹತ್ತರವಾದುದ್ದು, ಎಲ್ಲಾ ಸಾಹಿತಿಗಳು ಮೊದಲು ಕವಿತೆಯ ಮೂಲಕವೇ ಬರವಣಿಗೆ ಆರಂಭಿಸುತ್ತಾರೆ.ಕವಿತೆಗೆ ತಟ್ಟನೆ ಬರೆಯುವ ಗುಣವಿದೆ.ಆದರೆ ಗದ್ಯಕ್ಕೆ ಯೋಚಿಸಿ ಬರೆಯಬೇಕು. ತಗನ್ನಿಸಿದ್ದನ್ನು ತತಕ್ಷಣ ಹೇಳುವ ಸಾಧನ ಕವಿತೆ ಯಾಗಿರುವದರಿಂದಲೇ ಹನಿಗವನಗಳು, ಚುಟುಕುಗಳು, ಹಾಯ್ಕುಗಳು ಗಜಲ್ ಗಳು, ಜಾನಪದ ಗೀತೆಗಳು, ಲಾವಣಿಗಳು ಹುಟ್ಟಲು ಸಾಧ್ಯವಾಗಿದೆ.ಮುಂದೆ ಈ ಪ್ರಕ್ರಿಯೆ ಮಹಾಕಾವ್ಯ ಬರೆಯಲು, ಮಹಾಕಾದಂಬರಿ ಬರೆಯಲು ನೆರವಾಗುತ್ತದೆ.
ಆದ್ದರಿಂದ ಬರೆಯುವವರು ಸಿದ್ಧಾಂತದ ಬಗ್ಗೆ ಯಾಗಲಿ, ಪ್ರಾಕಾರದ ಬಗ್ಗೆಯಾಗಲಿ, ಚಿಂತಿಸದೆ ಬರೆಯುತ್ತಾ ಸಾಗಿ ನಿಮ್ಮ ಬರಹ ಗಟ್ಟಿಯಾಗಿದೆ, ಓದಿಸುವ ಕೇಳಿಕೊಳ್ಳುವ ಚೈತನ್ಯ ಹೊಂದಿದೆ ಎಂದು ಯಾರಾದರೂ ಹೇಳುವವರೆವಿಗೂ ಬರೆಯುತ್ತಾ ಸಾಗಿ ನಂತರ ಅದಕ್ಕೊಂದು ಚೌಕಟ್ಟು ಕೊಟ್ಟು ಬರೆದಿದ್ದನ್ನು ನೀವೇ ವಿಮರ್ಶೆಗೆ ಒಳಪಡಿಸಿಕೊಳ್ಳಿ. ಆಗ ನೀವು ಬರೆದ ಕವಿತೆ ಸರ್ವಕಾಲೀಕ ಗುಣ ಹೊಂದ ಬಲ್ಲದು ಎಂದು ಸಲಹೆ ನೀಡಿದರು.
ಮಾರೇನಹಳ್ಳಿ ಲೋಕೇಶ್ ಬರೆದಿರುವ ಪರಕಾಯ ಕವನಸಂಕಲನವನ್ನು ಸಾಹಿತಿ ಹುಣಸೂರಿನ ಹೊನ್ನೇನಹಳ್ಳಿ ಕುಮಾರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ ಕವಿತೆಗಳ ತಿರುಳು ಹೊಸ ವಿಚಾರಗಳನ್ನು ಧ್ವನಿಸುವಂತಿರಬೇಕೇ ಕವಿಯಲ್ಲಿ ಶ್ರದ್ದೆ, ಅಧ್ಯಯನ ಕಾರ್ಯತತ್ಪರತೆ ಮತ್ತು ಸಾಹಿತ್ಯದ ತುಡಿತವಿದ್ದರೆ ಉತ್ತಮ ಕವಿತೆಗಳು ಸೃಷ್ಟಿಯಾಗುತ್ತವೆ ಎಂದರು. ಈಗ ಬಿಡುಗಡೆಯಾದ ಮಾರೇನಹಳ್ಳಿ ಲೊಕೇಶ್ ಬರೆದಿರುವ ಪರಕಾಯ ಕವಿತೆಗಳಲ್ಲಿ ಕನ್ನಡದ ಹಿರಿಯ ಕವಿಗಳ ಸಾಹಿತ್ಯದ ಚಹರೆ ಇದೆ. ಆದರೆ ಆ ಚಹರೆಯನ್ನು ತಮ್ಮದಾಗಿಸಿಕೊಂಡು ಕವಿತೆಗೆ ಹೊಸಹುಟ್ಟು ಮತ್ತು ಮರುವ್ಯಾಖ್ಯಾನವನ್ನು ನೀಡುವ ಮೂಲಕ ಪರಕಾಯ ಸೃಷ್ಟಿಸಿದ್ದಾರೆ ಎಂದರು.
ಗ್ರಾಮಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಚಿಣ್ಣರನುಡಿ ಮಕ್ಕಳ ಪತ್ರಿಕೆಯನ್ನು ಬಿಡುಗಡೆಮಾಡಿ ಮಾತನಾಡಿದರು.
ಹಿರಿಯ ಸಾಹಿತಿ ಶಿ.ಕುಮಾರಸ್ವಾಮಿ, ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು , ಸಾಹಿತಿಗಳಾದ ಎಚ್.ಎಂ.ಗ0ಗಾಧರಶೆಟ್ಟಿ, ಡಿ.ನಾರಾಯಣಸ್ವಾಮಿ ಸವಿತಾರಮೇಶ್, ಸುಧಾಮಣಿ ಲಕ್ಷ್ಮಣಗೌಡ, ವಿ.ಜಿ.ಮಲ್ಲಿಕಾರ್ಜುನಸ್ವಾಮಿ , ಬಿಂದು ಶ್ರೀ, ಕನ್ನಡ ನಾಗರಾಜು, ಶ್ರೀಕಾಂತ್ ಚಿಮ್ಮಲ್,ಸಂಜಯಶೆಟ್ಟಿ, ಶ್ರೀಧರ್, ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಯನ್ನು ವಾಚಿಸಿದರು.
————-ಶ್ರೀನಿವಾಸ್ ಕೆ.ಆರ್ ಪೇಟೆ