ಕೆ.ಆರ್.ಪೇಟೆ-ತಾಲ್ಲೂಕು ಛಲವಾದಿ ಮಹಾಸಭಾ ವತಿಯಿಂದ 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಆಚರಿಸಲಾಯಿತು.
ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್ ನೇತೃತ್ವದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ತಾಲ್ಲೂಕು ಎಸ್.ಸಿ.ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯ ಆರಂಭದ ದಿನಗಳಲ್ಲಿ 1818ರ ಜನವರಿ 1ರಂದು ಮಹಾರಾಷ್ಟ್ರದ ಕೋರೆಂಗಾವ್ ಎಂಬ ಗ್ರಾಮದಲ್ಲಿ ಪೇಶ್ವೆಗಳು ಮಾಡುತ್ತಿದ್ದ ಜಾತಿ ಪದ್ದತಿ ಅಸ್ಪೃಷ್ಯತೆ ಆಚರಣೆಯ ವಿರುದ್ದ, ದಲಿತರಿಗೆ ಶಿಕ್ಷಣ ಶಿಕ್ಷಣ ನೀಡದೇ, ಯಾವುದೇ ಸ್ವಾತಂತ್ರ್ಯ ಇಲ್ಲದಂತೆ ಶೋಷಣೆ ಮಾಡುತ್ತಿದ್ದ ಪೇಶ್ವೆಗಳ ವಿರುದ್ದ ದಲಿತರು ಏಕಾಏಕಿ ದಂಗೆ ಎದ್ದು ಬೆಳಿಗ್ಗೆಯಿಂದ ರಾತ್ರಿವರೆಗೆ ಇಡೀ ದಿನ 25 ಸಾವಿರ ಪೇಶ್ವೆಗಳನ್ನು ಕೇವಲ 500ಮಂದಿ ಇದ್ದ ದಲಿತರು ಸದೆಬಡಿದು ಸೋಲಿಸಿದ ದಿನವನ್ನೇ ನಾವು ಕೋರೆಂಗಾವ್ ಯುದ್ದ ವಿಜಯೋತ್ಸವ ಎಂದು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ.
ಈ ಮಾಹಿತಿಯನ್ನು ಯಾವುದೇ ಇತಿಹಾಸದ ಪುಸ್ತಕದಲ್ಲಿ ದಾಖಲಾಗದಂತೆ ಪುರೋಹಿತ ಶಾಹಿ ವರ್ಗ ತಡೆದಿದೆ. ಆದರೂ ಸಹ ಅಂಬೇಡ್ಕರ್ ಸಂಶೋಧನಾ ಗ್ರಂಥಗಳಲ್ಲಿ ಇದು ಇತ್ತೀಚೆಗೆ ತಿಳಿದು ಬಂದಿದೆ. ಅಂದಿನಿoದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಪ್ರತಿವರ್ಷ ಜನವರಿ 1ರಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ರಾಜಯ್ಯ ಮಾತನಾಡಿ ಸುಮಾರು 200ವರ್ಷಗಳ ಹಿಂದೆ ಶಿಕ್ಷಣ,ಆತ್ಮ ಗೌರವ, ಸ್ವಾಭಿಮಾನಕ್ಕಾಗಿ ಭೀಮಾ ಕೋರೆಂಗಾವ್ ಯುದ್ಧವನ್ನು ದಲಿತ ಬಂದುಗಳು ಮಾಡಿದ್ದಾರೆ.ಇದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ. ಆದರೆ ಇತಿಹಾಸದಲ್ಲಿ ಈ ವಿಚಾರ ದಾಖಲಾಗದೇ ಇರುವುದು ಅತ್ಯಂತ ಖಂಡನೀಯವಾದುದು. ಅಂದು ಶಿಕ್ಷಣದ ಹಕ್ಕಿಗಾಗಿ ಕೋರೆಂಗಾವ್ ಗ್ರಾಮದ ದಲಿತರು ಬೃಹತ್ ಪೇಶ್ವೆಗಳ ವಿರುದ್ದ ಯುದ್ದ ಮಾಡಿದ ನೋವು ಎಷ್ಟಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.1818ರ ಜನವರಿ 1ರಂದು ಭೀಮಾ ಕೋರೆಗಾವ್ನಲ್ಲಿ ಮಹರ್ ವೀರ ಯೋಧರು ಶೋಷಿತರ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಅಸ್ಪೃಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನವಾಗಿದೆ ಎಂದರು.
ಪೂನಾದಲ್ಲಿ 200 ಕ್ಕೂ ಹೆಚ್ಚು ವರ್ಷಗಳ ಹಿಂದೆ ಅಸ್ಪೃಶ್ಯರ ಬದುಕು ಹೀನಾಯ ಸ್ಥಿತಿಯಲ್ಲಿತ್ತು. ಮೇಲ್ಟಾತಿಯವರ ಮೇಲೆ ತಮ್ಮ ನೆರಳು ಬೀಳದಂತೆ ಅಸ್ಪೃಶ್ಯ ಸಮಾಜದವರು ಮದ್ಯಾಹ್ನ 12 ಗಂಟೆಯಲ್ಲಿ ಸೊಂಟಕ್ಕೆ ಪೊರಕೆ, ಕೊರಳಿಗೆ ಮಡಕೆ ಕಟ್ಟಿಕೊಂಡು ಓಡಾಡುವಂತೆ ಶಾಸನ ವಿಧಿಸಲಾಗಿತ್ತು. ಈ ಕರಾಳ ಶಾಸನದಿಂದ ಬಿಡುಗಡೆಗೊಳ್ಳಲು 500ಮಹರ್ ಯೋಧರು ಬ್ರಿಟಿಷ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಜನವರಿ 1-1818 ರಂದು ಪೇಶ್ವ ಬಾಜಿರಾಯನ 28000 ಸೈನಿಕರ ವಿರುದ್ಧ ಮಹಾರಾಷ್ಟ್ರದ ಬೀಮಾನದಿ ತೀರದ ಕೋರೆಗಾಂವ್ನಲ್ಲಿ ದಂಡ ನಾಯಕ ಸಿದ್ದನಾಕನ ನೇತೃತ್ವದಲ್ಲಿ ಹೋರಾಡಿ ಗೆಲುವು ಸಾಧಿಸಿರುವುದು ಅಸ್ಪೃಶ್ಯರ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸಿಂಧುಘಟ್ಟ ಸೋಮಸುಂದರ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ರಾಜಯ್ಯ ಶಿಕ್ಷಕ ಹಳೆಯೂರು ಯೋಗೇಶ್, ವಾರ್ಡನ್ ರಾಮಕೃಷ್ಣ, ಚೌಡೇನಹಳ್ಳಿ ದೇವರಾಜು, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಬೂಕನಕೆರೆ ತಮ್ಮಯ್ಯ, ಬಸ್ತಿ ಪವಿಕುಮಾರ್, ಹೆರಗನಹಳ್ಳಿ ಪರಮೇಶ್, ಕಳ್ಳನಕೆರೆ ಶಂಕರ್, ನಗರೂರು ಮಂಜಯ್ಯ, ಮೆಣಸ ಬಾಲು, ಡಿ.ಜಿ.ಎಸ್.ಗಂಗಾಧರ್, ಜೈನ್ನಹಳ್ಳಿ ಹರೀಶ್ ಸೇರಿದಂತೆ ಹಲವು ಶಿಕ್ಷಕರು, ದಲಿತ ಬಂಧುಗಳು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
———-——-ಶ್ರೀನಿವಾಸ್ ಆರ್