
ಕೆ.ಆರ್.ಪೇಟೆ:ತಾಲ್ಲೂಕಿನ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ನಡೆಯಿತು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ದೀಪೋತ್ಸವದ ಸಾನಿಧ್ಯ ವಹಿಸಿದ್ದರು.
ದೀಪೋತ್ಸವದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ದೀಪೋತ್ಸವವು ಮನುಷ್ಯರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಕಾರ್ಯಕ್ರಮವಾಗಿದೆ.ಪವಿತ್ರ ಕಾರ್ತೀಕ ಮಾಸದ ಅಮಾವಾಸ್ಯೆಯ ಅಂಗವಾಗಿ ಪ್ರತಿ ವರ್ಷವು ಶ್ರೀ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ದೀಪೋತ್ಸವ ಕಾರ್ಯಕ್ರಮದಲ್ಲಿ ತೆಂಡೇಕೆರೆ, ಅಂಚನಹಳ್ಳಿ, ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಕ್ಷೇತ್ರ ರಕ್ಷಕ ಶ್ರೀ ವೀರಭದ್ರಸ್ವಾಮಿಯ ಕೃಫೆಗೆ ಪಾತ್ರರಾಗಿದ್ದಾರೆ.

ದೀಪೋತ್ಸವ ದಿನದಂದು ನಡೆಯುವ ಅನ್ನಧಾನ ಕಾರ್ಯಕ್ರಮಕ್ಕೆ ಕಳೆದ ನಾಲ್ಕು ವರ್ಷಗಳಿಂದ ಮನ್ ಮುಲ್ ನಿರ್ದೇಶಕರಾದ ಡಾಲು ರವಿ ಅವರು ಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಅವರು ಕ್ಷೇತ್ರದಲ್ಲಿ ನಡೆಯುವ ದೀಪೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ನೆರವು ನೀಡುವ ಮೂಲಕ. ಪೂರ್ಣ ಸಹಕಾರ ನೀಡುವ ಜೊತೆಗೆ ಶ್ರೀಮಠದ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೀಪೋತ್ಸವ, ಜಾತ್ರೆ, ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿವೆ. ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಶ್ರೀ ಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಾಲ್ಲೂಕಿನ ಹಲವರು ಗಣ್ಯರು, ದಾನಿಗಳು ತನು,ಮನ, ಧನ ಅರ್ಪಿಸಿ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಇದರಿಂದ ಶ್ರೀ ಮಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಇದಕ್ಕೆ ಪ್ರತ್ಯೇಕವಾಗಿ, ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಶ್ರೀ ಕ್ಷೇತ್ರ ಅಧಿಪತಿ ಶ್ರೀ ವೀರಭದ್ರಸ್ವಾಮಿಯು ಒಳ್ಳೆಯದನ್ನು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ದೀಪೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್. ಟಿ.ಓ.ಮಲ್ಲಿಕಾರ್ಜುನ್, ಮನ್ ಮುಲ್ ನಿರ್ದೇಶಕ ಡಾಲು ರವಿ, ತಾಲ್ಲೂಕು ವೀರಶೈವ ಮಹಾಸಭಾ ಆಧ್ಯಕ್ಷ ಸುಜೇಂದ್ರಕುಮಾರ್, ಉದ್ಯಮಿ ಚಂದ್ರಪ್ರಕಾಶ್, ಕೆ.ಎಸ್.ರಾಜೇಶ್, ಕೆ.ಎಸ್.ಸತೀಶ್, ಹೆಚ್. ಎಲ್.ಬಿ.ಸಿ ಪ್ರಕಾಶ್, ತೆಂಡೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಗೋವಿಂದಶೆಟ್ಟಿ, ಉಪಾಧ್ಯಕ್ಷೆ ನಾಗರತ್ನ ಗಂಗಾಧರ್, ಪಿಡಿಓ ಸತೀಶ್, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಸುಮಾರು 5ಸಾವಿರಕ್ಕು ಹೆಚ್ಚು ಮಂದಿ ಭಕ್ತಾದಿಗಳು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೀಪೋತ್ಸವದ ಅಂಗವಾಗಿ ಕ್ಷೇತ್ರ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವು ತೆಂಡೇಕೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
——--ಶ್ರೀನಿವಾಸ್ ಕೆ.ಆರ್ ಪೇಟೆ