ಕೆ.ಆರ್.ಪೇಟೆ-ಕಳೆದ 25 ವರ್ಷಗಳಿಂದ ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಹಾಗೂ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ನೂರಾರು ಅಂಗಡಿ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಮಾಡದೇ ಕಡಿಮೆ ಬಾಡಿಗೆಗೆ ನೀಡಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಆಗುತ್ತಿರುವುದನ್ನು ತಪ್ಪಿಸಲು ಬಹಿರಂಗ ಹರಾಜು ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕರವೇ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು ಹಾಗೂ ಆರ್.ಟಿ.ಐ ಕಾರ್ಯಕರ್ತ ಜಯಣ್ಣ ಲೊಕಾಯುಕ್ತ ಡಿವೈಎಸ್‌ಪಿ ಸುನಿಲ್ ರವರಿಗೆ ದೂರು ನೀಡಿದರು.
ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಲೊಕಾಯುಕ್ತ ಡಿವೈಎಸ್‌ಪಿ ಸುನಿಲ್ ರವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆ ಹಾಗು ಸಾರ್ವಜನಿಕರ ಕುಂದುಕೊರತೆ ಆಲಿಕೆಯ ಸಂದರ್ಭದಲ್ಲಿ ಅವರುಗಳು ಅಧಿಕಾರಿಗಳ ಕಳ್ಳಾಟವನ್ನು ಲೋಕಾಯುಕ್ತರ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಲೋಕಾಯುಕ್ತ ಡಿ.ವೈ.ಎಸ್.ಪಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಪುರಸಭಾ ಮುಖ್ಯಾಧಿಕಾರಿ ನಟರಾಜ್ ಹಾಗೂ ತಾ.ಪಂ ಇ.ಓ ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದರು.
ಸರ್ಕಾರಿ ಆಸ್ತಿಪಾಸ್ತಿಗಳ ಅಕ್ರಮ ಒತ್ತುವರಿ ಹಾಗೂ ಪರಭಾರೆಯನ್ನು ತಪ್ಪಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ನಿವೇಶನ ಹಾಗೂ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆದು ಕೊಳ್ಳಬೇಕು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾಂಪೌಂಡ್ ಜಾಗ ದಲ್ಲಿರುವ 19ಗುಂಟೆ ಭೂಮಿಯನ್ನು ಅಕ್ರಮವಾಗಿ ಕಾಂಪೌಂಡ್ ಒಡೆದು ಒತ್ತುವರಿ ಮಾಡಿಕೊಳ್ಳಲು ಸಂಚು ರೂಪಿಸಿರುವ ಪ್ರಭಾವಿ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ನಟರಾಜ್ ಅವರಿಗೆ ಸೂಚನೆ ನೀಡಿದರು.
ಗ್ರಾಮೀಣ ಜನರನ್ನು ಸತಾಯಿಸಿ ಕಛೇರಿಗೆ ಅಲೆದಾಡಿಸಬಾರದು.ನಿಗದಿತ ಅವಧಿಯೊಳಗೆ ಜನ ಸಾಮಾನ್ಯರು ಹಾಗೂ ರೈತರ ಕೆಲಸ ಮಾಡಿಕೊಡುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಡಿವೈಎಸ್‌ಪಿ ಸುನಿಲ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಲೋಕಾಯುಕ್ತ ಉಪಾಧೀಕ್ಷಕರಾದ ಸುನಿಲ್ ಕುಮಾರ್ ಅವರಿಗೆ ದೂರುಗಳ ಮಹಾಪೂರವೇ ಹರಿದು ಬಂದಿತ್ತು.
ಲಂಚದ ಹಣಕ್ಕಾಗಿ ಒತ್ತಾಯಿಸಿ ಶ್ರೀ ಸಾಮಾನ್ಯರ ಕಾನೂನು ಬದ್ಧವಾದ ಕೆಲಸ ಕಾರ್ಯಗಳನ್ನು ಮಾಡಿಕೊಡದೆ ಸತಾಯಿಸಿ ಕಛೇರಿಗೆ ಅಲೆದಾಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಸುನಿಲ್ ಕುಮಾರ್, ಸಕಾಲದ ಕಾಲ ಮಿತಿಯೊಳಗೆ ಜನರ ಕಾನೂನು ಬದ್ಧವಾದ ಸರ್ಕಾರಿ ಕೆಲಸಗಳನ್ನು ಮಾಡಿಕೊಡಬೇಕು. ನಮಗೆ ಸರ್ಕಾರಿ ಕೆಲಸ ದೊರೆತಿರುವುದು ಪೂರ್ವಜನ್ಮದ ಪುಣ್ಯವಾಗಿದೆ. ನಾವು ಸರ್ಕಾರದಿಂದ ಜನರ ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ಪಡೆದು ಕೊಳ್ಳುತ್ತಿರುವುದರಿಂದ, ನಾವು ಪಡೆಯುವ ಸಂಬಳಕ್ಕೆ ಮೋಸಮಾಡದೇ ನಮ್ಮ ಆತ್ಮ ಸಾಕ್ಷಿಯು ಒಪ್ಪುವಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಬುದ್ದಿವಾದ ಹೇಳಿದರು.
.
ಕಳೆದ ಆರು ತಿಂಗಳುಗಳಿಂದ ಸರ್ಕಾರಿ ಕಛೇರಿಗೆ ಅರ್ಜಿ ಸಲ್ಲಿಸಿ ಅಲೆದಾಡುತ್ತಿರುವ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕೆಲಸ ಮಾಡಬೇಕು. ಗುತ್ತಿಗೆದಾರ ಜಯಕೃಷ್ಣೇಗೌಡ ಅವರು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿರುವ ಸರ್ಕಾರಿ ಕಟ್ಟೆಯನ್ನು ಸಾರ್ವಜನಿಕರ ಅನುಕೂಲಕ್ಕೆ ಬಿಡಿಸಿಕೊಡಲು ನೀರಾವರಿ ಇಲಾಖೆ, ತಾಲೂಕು ಪಂಚಾಯತಿ, ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ಕಟ್ಟೆಯನ್ನು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ವಶಕ್ಕೆ ಪಡೆದುಕೊಳ್ಳಬೇಕು ಎಂದು ಲೋಕಾಯುಕ್ತ ಅಧಿಕಾರಿ ನಿರ್ದೇಶನ ನೀಡಿದರು.
ತಹಶೀಲ್ದಾರ್ ಅಶೋಕ್, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಜಯರತ್ನ, ಬ್ಯಾಟರಾಯಗೌಡ, ಮೋಹನರೆಡ್ಡಿ ಸಭೆಯ ನೇತೃತ್ವ ವಹಿಸಿದರೆ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಆರ್‌ಎಫ್‌ಓ ಅನಿತಾಪ್ರವೀಣ್, ಗ್ರೇಡ್-2 ತಹಶೀಲ್ದಾರ್ ಲೋಕೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಡಾ.ದಿವಾಕರ್, ಬಿಸಿಎಂ ಅಧಿಕಾರಿ ಎಂ.ಎನ್. ವೆಂಕಟೇಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳಾದ ನವೀನ್, ಸುಬ್ಬಯ್ಯ, ನೀರಾವರಿ ಇಲಾಖೆಯ ಎಇಇ ಗಳಾದ ಕೃಷ್ಣೇಗೌಡ, ವಿಶ್ವನಾಥ್, ದೇವೇಗೌಡ, ರಾಮಕೃಷ್ಣೇಗೌಡ, ಅರುಣಕುಮಾರ್, ಡಾ.ನರಸಿಂಹರಾಜು, ಜ್ಯೋತಿಲಕ್ಷ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
—–—ಶ್ರೀನಿವಾಸ್ ಕೆ ಆರ್ ಪೇಟೆ