ಕೆ.ಆರ್.ಪೇಟೆ-ಮಡುವಿನಕೋಡಿ-ಸೊಸೈಟಿ-ಚುನಾವಣೆ- ಎಂ.ಬಿ.ಹರೀಶ್-ಬಣಕ್ಕೆ-ಭರ್ಜರಿ-ಗೆಲುವು

ಕೆ.ಆರ್.ಪೇಟೆ: ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಬಣದ ಅಭ್ಯರ್ಥಿಗಳು ಬರೋಬ್ಬರಿ 8ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಂ.ಬಿ.ಹರೀಶ್ ಬಣದ ಅಭ್ಯರ್ಥಿಗಳಾದ ಎಂ.ಪಿ.ಲೋಕೇಶ್(542ಮತಗಳು), ರವಿಕುಮಾರ್, ಸತೀಶ್, ಶ್ರೀನಿವಾಸ್ ಮೇಸ್ತಿç, ಸುನಂದಮ್ಮ, ಹೇಮಾ, ಮಂಗಳಮ್ಮ ಹಾಗೂ ಬೇಬಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾದ ಎಂ.ಪಿ.ವಿಜಯ್‌ಕುಮಾರ್, ಸಂಜಯ್, ಎಂ.ಆರ್.ರಾಮಚಂದ್ರು ಚುನಾಯಿತರಾಗಿದ್ದಾರೆ. ಅದೇ ರೀತಿ ಸ್ವತಂತ್ರ ಅಭ್ಯರ್ಥಿ ಮಹೇಶ್.ಡಿ.ಬಿ. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಮನ್‌ಮುಲ್ ನಿರ್ದೇಶಕರಾದ ಎಂ.ಬಿ.ಹರೀಶ್ ಅವರು ನನ್ನ ಮೇಲೆ ಹಾಗೂ ನನ್ನ ತಂಡದ ಮೇಲೆ ವಿಶ್ವಾಸವಿಟ್ಟು 12ಸ್ಥಾನಗಳಿಗೆ 8ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಮಡುವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರವನ್ನು ನೀಡಿರುವ ಸಂಘದ ವ್ಯಾಪ್ತಿಯ ಎಲ್ಲಾ ಮತದಾರರಿಗೆ, ಹಾಗೂ ಮುಖಂಡರಿಗೆ ನಾನು ಆಭಾರಿಯಾಗಿರುತ್ತೇನೆ. ಸಹಕಾರ ಸಂಘದ ಚುನಾವಣೆಯಲ್ಲಿ ನನಗೆ ಸೋಲು ನೀಡಬೇಕು ಎಂದು ವಿರೋಧಿಗಳು ಎಷ್ಟೇ ಕುತಂತ್ರ ನಡೆಸಿದರೂ ನನ್ನ ಗ್ರಾಮದ ಜನತೆ ಹಾಗೂ ನನ್ನ ಪಂಚಾಯಿತಿ ವ್ಯಾಪ್ತಿಯ ಜನತೆ ನನ್ನನ್ನು ಕೈಬಿಟ್ಟಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ನನ್ನ ತಂಡಕ್ಕೆ 8ಸ್ಥಾನಗಳನ್ನು ನೀಡುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಇದೇ ರೀತಿ ಮುಂಬರುವ ಜಿ.ಪಂ, ತಾ.ಪಂ, ಗ್ರಾ.ಪಂ.ಚುನಾವಣೆಗಳಲ್ಲಿ ನನಗೆ ಆಶೀರ್ವಾದ ಮಾಡಬೇಕು. ಗ್ರಾಮದ ಅಭಿವೃದ್ಧಿ, ಪಂಚಾಯಿತಿ ಅಭಿವೃದ್ಧಿ, ಹೋಬಳಿಯ ಅಭಿವೃದ್ಧಿ ಹಾಗೂ ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಕೈಲಾದ ಸೇವೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಪ್ರಾಮಾಣಿಕವಾಗಿ ಮಾಡುವುದಾಗಿ ಎಂ.ಬಿ.ಹರೀಶ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವಪ್ರಸಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ಉದ್ಯಮಿ ಎಂ.ಆರ್.ಮನು, ತಾಲ್ಲೂಕು ದರಖಾಸ್ತು ಕಮಿಟಿ ಮಾಜಿ ಸದಸ್ಯ ಕಾಂತರಾಜು, ಮಡುವಿನಕೋಡಿ ಉಮೇಶ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಸಹಕಾರಿ ಬಂಧುಗಳು ಉಪಸ್ಥಿತರಿದ್ದು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

– ಶ್ರೀನಿವಾಸ್‌ ಆರ್.



Leave a Reply

Your email address will not be published. Required fields are marked *

× How can I help you?