ಕೆ.ಆರ್.ಪೇಟೆ-ಒಬ್ಬರನ್ನು’ಕುಡಿತದ ಚಟ’ದಿoದ ಮುಕ್ತಗೊಳಿಸಿದರೆ ಅವರ ಕುಟುಂಬಕ್ಕೊoದು ದೇವಾಲಯವನ್ನು ನಿರ್ಮಿಸಿದಂತೆ-ತಿಲಕ್‌ರಾಜ್

ಕೆ.ಆರ್.ಪೇಟೆ-ದುಶ್ಚಟಗಳು ತೂತು ಬಿದ್ದಿರುವ ಪಾತ್ರೆಯಿದ್ದಂತೆ.ತೂತು ಬಿದ್ದ ಪಾತ್ರೆಗೆ ನಾವು ಎಷ್ಟೇ ನೀರು ತುಂಬಿದರೂ ಅದು ಸೋರಿ ಹೋಗುತ್ತದೆ. ಹಾಗೆಯೇ ದುಶ್ಚಟಗಳಿಗೆ ಒಳಗಾದ ವ್ಯಕ್ತಿ ಎಷ್ಟೇ ಸಂಪಾದಿಸಿದರೂ ಅವರ ಶ್ರಮದ ಫಲ ಸೋರಿಹೋಗುತ್ತದೆ, ಜೊತೆಗೆ ಆರೋಗ್ಯವು ಕೂಡ ಹಾಳಾಗುತ್ತದೆ. ಕುಡಿತಕ್ಕೆ ದಾಸನಾದ ವ್ಯಕ್ತಿಗೆ ಜನರು ಯಾವುದೇ ಗೌರವ ಕೊಡುವುದಿಲ್ಲ ಹಾಗಾಗಿ ದುಶ್ಚಟಗಳಿಂದ ದೂರವಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ತಿಲಕ್‌ರಾಜ್ ತಿಳಿಸಿದರು.

ಅವರು ತಾಲೂಕಿನ ಬೂಕನಕೆರೆ ಗ್ರಾಮದ ಸರ್ಕಾರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ್ದ 1887ನೇ ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿ ಕುಡಿತದ ಚಟದಿಂದ ಬಿಡುಗಡೆಯಾಗಿರುವ ಶಿಬಿರಾರ್ಥಿಗಳ ಜೊತೆ ಸಂವಹನ ಕಾರ್ಯಕ್ರಮ ನಡೆಸಿ ಮಾತನಾಡಿದರು.

ಸಪ್ತ ವ್ಯಸನಗಳಲ್ಲಿ ಮದ್ಯಪಾನವೇ ಮೊದಲ ಮೆಟ್ಟಿಲು. ಇದರಲ್ಲಿ ಜಾರಿದರೆ ನಮ್ಮ ಬದುಕಿನ ಯಶಸ್ಸಿನ ಗುರಿ ಮುಟ್ಟವ ಬದಲು ಎಲ್ಲದರಲ್ಲೂ ನಾವು ಜಾರಿ ಬೀಳುತ್ತೇವೆ. ಕಷ್ಠಗಳನ್ನು ಮರೆಯುವುದಕ್ಕೆ ಕುಡಿತ ಅಲ್ಲ. ಕಷ್ಠ ಮರೆಯಲು ಕುಡಿತದ ಚಟಕ್ಕೆ ಒಳಗಾದರೆ ನಮಗೆ, ನಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಷ್ಠ ಬರುತ್ತದೆ ಎಂದ ತಿಲಕ್ ರಾಜ್ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಧರ್ಮಸ್ಥಳ ಸಂಸ್ಥೆ ನಿರಂತರ ಶ್ರಮಿಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿ ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿಗಳನ್ನು ಚಟ ಮುಕ್ತಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ 1,20 ಲಕ್ಷ ಜನ ನಮ್ಮ ಶಿಬಿರದ ಮೂಲಕ ಕುಡಿತದ ಚಟದಿಂದ ಬಿಡುಗಡೆಯಾಗಿ ಸುಂದರ ಬದುಕು ಸಾಗಿಸುತ್ತಿದ್ದಾರೆ. ಹಿಂದಿನ ಶಿಬಿರಗಳಲ್ಲಿ ಕುಡಿತದ ಚಟದಿಂದ ಮುಕ್ತಿ ಪಡೆದವರು ಇಂದಿನ ಶಿಬಿರಗಳಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದು ಸಮಾಜದ ಮತ್ತು ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿದ್ದಾರೆಂದರು.

ಒoದು ಕುಟುಂಬದ ಸದಸ್ಯನನ್ನು ಕುಡಿತದ ಚಟದಿoದ ಮುಕ್ತಗೊಳಿಸಿದರೆ ಕುಟುಂಬಕ್ಕೊoದು ದೇವಾಲಯವನ್ನು ನಿರ್ಮಿಸಿದಂತೆ. ಪ್ರಸಕ್ತ ಬೂಕನಕೆರೆಯ ಮದ್ಯವರ್ಜನ ಶಿಬಿರದಲ್ಲಿ 65 ಜನ ಕುಡಿತದ ಚಟದಿಂದ ಬಿಡುಗಡೆಯಾಗಿ ಬದಲಾವಣೆಯ ಬದುಕಿನತ್ತ ಸಾಗುತ್ತಿದ್ದಾರೆ. ಇದರಿಂದ 65 ಕುಟುಂಬಗಳಿಗೆ ಒಂದೊoದು ದೇವಾಲಯವನ್ನು ನಿರ್ಮಿಸಿದ ಸಾರ್ಥಕತೆ ನಮ್ಮ ಧರ್ಮಸ್ಥಳ ಸಂಸ್ಥೆಗಿದೆ. ನಮ್ಮ ಶಿಬಿರದ ಮೂಲಕ ನೀವು ಬದಲಾಗಿದ್ದೀರಿ. ಶಿಬಿರದ ಪ್ರಯೋಜನ ಕ್ಷಣಿಕವಾಗದೆ ನಿರಂತರವಾಗಿರಬೇಕು. ಶಿಬಿರದ ಅನಂತರವೂ ನಮ್ಮ ಸಂಸ್ಥೆ ನಿಮ್ಮ ಕುಟುಂಬದೊoದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ ಎಂದ ತಿಲಕ್ ರಾಜ್ ಭರವಸೆ ಇತ್ತರು.

ಇದುವರೆಗೆ ನಿಮ್ಮ ದುಡಿಮೆಯ ಫಲ ಮದ್ಯದಂಗಡಿಯ ಪಾಲಾಗುತ್ತಿತ್ತು. ನಿಮ್ಮ ಶ್ರಮದ ಫಲ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಸಿಕ್ಕದೆ ಸೋರಿಕೆಯಾಗುತ್ತಿತ್ತು. ಕುಡಿತದ ಬಿಟ್ಟ ಅನಂತರ ನಿಮ್ಮ ಬೆವರಿನ ಫಲ ನಿಮ್ಮ ಕುಟುಂಬಕ್ಕೆ ಮೀಸಲಾಗಿರಲಿ. ಜೀವನ ಸಾಗಿಸಲು ದುಡಿಮೆ ಬೇಕು. ದುಡಿಮೆಯಿದ್ದರೆ ನಮ್ಮ ಮನಸ್ಸು ಪ್ರಗತಿಯತ್ತ ಯೋಚಿಸುತ್ತದೆ. ಇನ್ನು ಮುಂದೆ ನೀವು ಮನೆಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಬೇಕಾದ ವ್ಯಕ್ತಿಗಳಾಗಿ.ನೀವೆಲ್ಲರೂ ಧರ್ಮಸ್ಥಳ ಕುಟುಂಬದ ಮಕ್ಕಳು. ನಮ್ಮ ಮಕ್ಕಳಿಗೆ ಸಿನಿಮಾ ನಟ ನಟಿಯರು ಹಿರೋಗಳಾಗುತ್ತಿದ್ದಾರೆ. ಇದರ ಬದಲು ನಮ್ಮ ನಡವಳಿಕೆಯ ಮೂಲಕ ನಮ್ಮ ಮಕ್ಕಳಿಗೆ ನಾವೇ ಆದರ್ಶವಾಗಬೇಕು ಎಂದು ಕಿವಿ ಮಾತು ಹೇಳಿದರು.

1887 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಬೂಕನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಆರ್.ಶ್ಯಾಮ್‌ಪ್ರಸಾದ್ ಮಾತನಾಡಿ, ಮದ್ಯವರ್ಜನ ಶಿಬಿರಕ್ಕೆ ನಾವು ಸಹಕಾರ ನೀಡಿರಬಹುದು. ಆದರೆ ಇದರ ಯಶಸ್ಸಿನ ಹಿಂದೆ ಧರ್ಮಸ್ಥಳ ಸಂಸ್ಥೆಯ ಸಿಬ್ಬಂಧಿಗಳ ಶ್ರಮವಿದೆ. ಮದ್ಯವರ್ಜನ ಶಿಬಿರಗಳಿಂದ ಧರ್ಮಸ್ಥಳ ಸಂಸ್ಥೆಗೆ ಯಾವುದೇ ಲಾಭವಿಲ್ಲ. ಆದರೆ ಸಮಾಜಕ್ಕೆ ಲಾಭವಾಗಿದೆ. ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿಗಳನ್ನು ಶಿಬಿರಕ್ಕೆ ಕರೆತಂದು ಅವರನ್ನು ತಿದ್ದಿ ತೀಡಿ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿರುವ ಸಂಸ್ಥೆ ಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಮಧ್ಯಪಾನ ದುಶ್ಚಟದಿಂದ ಆಗುವ ದುಷ್ಪರಿಣಾಮಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಬೂಕನಕೆರೆ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ತಾ.ಪಂ.ಮಾಜಿ ಸದಸ್ಯರಾದ ಮೀನಾಕ್ಷಿಪುಟ್ಟರಾಜು, ಹೆಳವೇಗೌಡ, ಬಿ.ಎನ್.ಪುಟ್ಟರಾಜು, ಗ್ರಾಮದ ಮುಖಂಡ ಮಹೇಶ್, ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮಾಧವನಾಯಕ್, ಶಿಬಿರದ ವೈದ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್, ಶಿಬಿರಾಧಿಕಾರಿ ಕುಮಾರ್, ಆರೋಗ್ಯ ಸಹಾಯಕಿ ಫಿಲೋಮಿನಾ, ಯೋಗ ಶಿಕ್ಷಕ ಕೆ.ಟಿ.ರವಿ, ಮೇಲ್ವಿಚಾರಕ ಪ್ರಕಾಶ್ ಆಚಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

——————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?