ಕೆ.ಆರ್.ಪೇಟೆ:ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ದಮನಿತರ ಪರವಾಗಿ ಧ್ವನಿಯೆತ್ತಿದವರು,ವೋಟ್ ಬ್ಯಾಂಕ್ ರಾಜಕಾರಣ ನಡೆಸುವವರಿಂದ ಮಹಾತ್ಮ ಗಾಂಧಿಯವರ ವಿರುದ್ದ ವ್ಯವಸ್ಥಿತ ಅಪಪ್ರಚಾರಗಳು ನಡೆಯುತ್ತಿವೆ.ಈ ಅಪಪ್ರಚಾರಗಳು ಯುವ ಜನತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಅವರು ಪಟ್ಟಣದ ಗ್ರಾಮ ಭಾರತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯದ ಕರ್ನಾಟಕ ಸಂಘ, ಕೆ.ಆರ್.ಪೇಟೆಯ ಉದಯ ರವಿ ಟ್ರಸ್ಟ್, ಅಕ್ಕಿಹೆಬ್ಬಾಳಿನ ಲೋಕಾಯನ ಕಲ್ಚರಲ್ ಟ್ರಸ್ಟ್, ತಾಲೂಕು ರೈತಸಂಘ, ತಾಲೂಕು ಪದವಿಪೂರ್ವ ಉಪನ್ಯಾಸಕ ಸಂಘ ಮತ್ತು ಗ್ರಾಮ ಭಾರತಿ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಹಾತ್ಮ ಗಾಂಧಿಯವರ ಬದಕು-ಬರಹ ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ಚಿಂತನೆಗಳ ವಿಸ್ತೃತ ರೂಪವೇ ಮಹಾತ್ಮ ಗಾಂಧಿ.ಭಾರತೀಯ ಪರಂಪರೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ನಿತ್ಯ ಸ್ಮರಣೀಯ ವ್ಯಕ್ತಿತ್ವಗಳು.12ನೇ ಶತಮಾನದಲ್ಲಿ ಬಸವಣ್ಣ ತೋರಿಸಿದ ಸರ್ವ ಸಮಾನ ಸಮಾಜ ನಿರ್ಮಾಣದ ಕನಸಿನ ತಳಹದಿಯ ಮೇಲೆ ಗಾಂಧಿಯವರ ಚಿಂತನೆಗಳು ವಿಸ್ತೃತಗೊಂಡಿವೆ.ಗಾಂಧಿ ಸಮಾಜ ಸುಧಾರಕರಲ್ಲ.ಬದಲಾಗಿ ಹೃದಯಗಳನ್ನು ಸುಧಾರಿಸಲು ಪ್ರಯತ್ನಿಸಿದವರು.
ಆದರೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಲಾಗಿದೆ. ಹಣವುಳ್ಳವರ ಮತ್ತು ವಾಮಮಾರ್ಗದಲ್ಲಿ ಅಧಿಕಾರ ಪಡೆದವರನ್ನು ಯುವ ಸಮುದಾಯ ಹಿಂಬಾಲಿಸುತ್ತಿದೆ. ಸಹಿಷ್ಣುತೆ, ಸಹಬಾಳ್ವೆ ಮತ್ತು ಸಮನ್ವಯ ಬದುಕಿನ ಪ್ರತೀಕವಾಗಿದ್ದ ಗಾಂಧಿಯ ಬಗೆಗೆ ಅಸಹನೆಯ ಮಾತನಾಡುತ್ತಾ ಹಿಂಸಾ ಪ್ರೌವೃತ್ತಿಯನ್ನು ಚಿಗುರೊಡಿಸುವ ಕೆಲಸ ಮಾಡಲಾಗುತ್ತಿದೆ. ಸಮಸ್ತ ವಿಶ್ವವೇ ಗಾಂಧಿ ಸ್ಮರಣೆ ಮಾಡುತ್ತಿದ್ದರೆ ಗಾಂಧಿ ಹುಟ್ಟಿದ ನಾಡಿನಲ್ಲಿ ಅವರ ಚಿಂತನೆಗಳನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಅಪಾಯಕಾರಿ ಬೆಳವಣಿಗೆ ಎಂದ ಪ್ರೊ.ಸಿದ್ದರಾಮಯ್ಯ ಯುವ ಸಮುದಾಯದ ಬಳಿಗೆ ಗಾಂಧೀಜಿಯವರನ್ನು ತಲುಪಿಸುವ ಕೆಲಸ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತ ವಿಚಾರ ಸಂಕೀರ್ಣಗಳನ್ನು ನಡೆಸಿ ಗಾಂಧಿ ಕೃತಿಗಳನ್ನು ಓದಿಸುವ ಕೆಲಸ ಆಗಬೇಕೆಂದರು.
ಅಹಿಂಸೆ ಎನ್ನುವುದು ಗಾಂಧಿ ಮಾನವ ಜಗತ್ತಿಗೆ ನೀಡಿದ ಬಹುದೊಡ್ಡ ಹೋರಾಟದ ಅಸ್ತ್ರ. ಜಗತ್ತಿನ ಮೇಲೆ ಮಹಾತ್ಮ ಗಾಂಧಿ ಬೀರಿದ ಪ್ರಭಾವ ಅಸಾಮಾನ್ಯವಾದುದು. ಭಾರತವನ್ನು ಸ್ವಾತ್ಯಂತ್ರದ ಕಡೆಗೆ ಕರೆದೊಯ್ಯುವಂತಹ ಅಹಿಂಸಾತ್ಮ ಹೋರಾಟದ ಪ್ರಯೋಗ ಭಾರತದಿಂದ ಬ್ರಿಟೀಷರನ್ನು ಓಡಿಸಿತಲ್ಲದೆ ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್ ಅವರಂತಹ ಭವಿಷ್ಯದ ನಾಯಕರುಗಳಿಗೆ ಪ್ರೇರಣೆಯಾಯಿತು. ಜಗತ್ತಿನ ಉದ್ದಗಲಕ್ಕೂ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳಿಗೆ ಆದರ್ಶವಾಯಿತು. ಸತ್ಯಾಗ್ರಹ ಮತ್ತು ಅಹಿಂಸಾ ತತ್ವಗಳ ಪ್ರವರ್ತಕರಾಗಿದ್ದ ಗಾಂಧಿಯವರ ಜೀವನದಲ್ಲಿ ಜಗತ್ತಿನ ಶಾಂತಿಗೆ ಅಗತ್ಯವಾದ ಮದ್ದಿದೆ ಎಂದರು.
ತನ್ನ ಹುಟ್ಟಿನಿಂದಲೂ ಕೊನೆಯ ಉಸಿರಿನವರೆಗೆ ತನ್ನ ಜೀವನವನ್ನೆ ಪ್ರಯೋಗಕ್ಕೆ ಒಡ್ಡಿಕೊಂಡಿದ್ದ ಗಾಂಧಿ ತನ್ನ ಅರಿವಿನ ಮಿತಿಯೊಳಗೆ ಘಟಿಸಿಹೋದ ತಪ್ಪುಗಳನ್ನು ಅಹಂ ಇಲ್ಲದೆ ಒಪ್ಪಿಕೊಂಡು ತಿದ್ದಿಕೊಂಡು ಮುಂದೆ ಸಾಗಿದರು ಎಂದು ಮಹಾತ್ಮಾ ಗಾಂಧೀಜಿಯವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಬೆoಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೊಡೆ.ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಬೆಂಗಳೂರಿನ ಗಾಂಧಿ ಭವನದ ನಿದೇಶಕ ಪ್ರೊ.ಜಿ.ಬಿ.ಶಿವರಾಜು ಉಪಸ್ಥಿತರಿದ್ದು ಮಾತನಾಡಿದರು.
ಉದ್ಘಾಟನೆಯ ಅನಂತರ ನಡೆದ ವಿಚಾರ ಗೋಷ್ಠಿಗಳಲ್ಲಿ ಲೇಖಕಿ ಡಾ.ಹೆಚ್.ಎಸ್.ಅನುಪಮಾ ಅವರು ಗಾಂದೀಜಿ ಮತ್ತು ಅಂಬೇಡ್ಕರ್ ನಡುವಿನ ಅಂದಿನ ಭಿನ್ನಾಭಿಪ್ರಾಯಗಳನ್ನು ಅರ್ಥೈಸಿಕೊಳ್ಳುವುದರ ಬಗ್ಗೆ ವಿವರಿಸಿದರು.
ಗಾಂಧೀಜಿಯಯವರ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಹಾಗೂ ವ್ಯಕ್ತಿಗಳನ್ನು ಕುರಿತು ಬಸರಾಳು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಲೋಕೇಶ್ ಬೆಕ್ಕಳಲೆ, ಮಂಡ್ಯ ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆಗಳನ್ನು ಕುರಿತು ಮಂಡ್ಯ ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶಿವರಾಮು, ಗ್ರಾಮೀಣ ಯುವಜನತೆ ಮತ್ತು ಸ್ವಾವಲಂಬನೆ ಕುರಿತು ಮೇಲುಕೋಟೆಯ ಡಾ.ಸುಮನಸ್ ಕೌಲಗಿ ವಿಚಾರ ಮಂಡಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ವಿ.ಜಗದೀಶ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ವಿಚಾರ ಗೋಷ್ಠಿಗಳಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ವರದಿ-ಶ್ರೀನಿವಾಸ್ ಕೆ ಆರ್ ಪೇಟೆ