ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ರೈತರು ದರಖಾಸ್ತು ಭೂಮಿ ಮಂಜೂರಾತಿಗಾಗಿ ಫಾರಂ.ನಂ. 50 ರಲ್ಲಿ ಅಕ್ರಮ-ಸಕ್ರಮದಡಿ ಭೂಮಿ ಮಂಜೂರಿಗೆ ಅರ್ಜಿ ಸಲ್ಲಿಸಿರುವ ತಾಲೂಕಿನ ಸಮಸ್ತ ರೈತರು ಮೇ.05 ರ ಸೋಮವಾರ ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಛೇರಿಗೆ ಫಾರಂ.ನಂ. 50ರಲ್ಲಿ ಅರ್ಜಿ ಸಲ್ಲಿಸಿರುವ ಜೆರಾಕ್ಸ್ ಪ್ರತಿ ಸೇರಿದಂತೆ ಇನ್ನಿತರ ಸೂಕ್ತ ದಾಖಲಾತಿ ಮತ್ತು ಅರ್ಜಿ ದಾಖಲೆಗಳೊಂದಿಗೆ ಆಗಮಿಸಿ ಅರ್ಜಿದಾರರ ಸಮಾವೇಶವನ್ನು ಹಮ್ಮಿಕೊಂಡಿದ್ದು, ಅಲ್ಲಿ ಮನವಿ ತಮ್ಮ ಮನವಿ ಪತ್ರವನ್ನು ದರಖಾಸ್ತು ಸಮಿತಿಯ ಸದಸ್ಯರಾದ ನಮಗೆ ನೀಡುವಂತೆ ತಾಲೂಕು ದರಖಾಸ್ತು (ಅಕ್ರಮ-ಸಕ್ರಮೀಕರಣ) ಸಮಿತಿಯ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಗುಡುಗನಹಳ್ಳಿಯ ಕೋಮಲ ರಾಯಪ್ಪ ಮನವಿ ಮಾಡಿದ್ದಾರೆ.
ಪಟ್ಟಣದ ಟ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಕ್ರಮ ಸಕ್ರಮ ಸಮಿತಿ ಸದಸ್ಯರು ಈ ಹಿಂದೆ ತಾಲೂಕಿನ ತಹಸೀಲ್ದಾರ್ ಆಗಿದ್ದ ರೂಪ ಎನ್ನುವವರು ತಾಲೂಕಿನಲ್ಲಿ ನಮೂನೆ 50 ರ ಅಡಿಯಲ್ಲಿ ವಿಲೇ ಮಾಡಬೇಕಾಗಿದ್ದ ಅಕ್ರಮ ಸಕ್ರಮದ ಯಾವುದೇ ಅರ್ಜಿಗಳು ಇಲ್ಲ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ.
ನಮೂನೆ 50ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ನೂರಾರು ರೈತರು ತಮ್ಮ ಅನುಭವದ ಜಮೀನಿನ ಅಕ್ರಮಕ್ಕೆ ಅರ್ಜಿ ಸಲ್ಲಿಸಿ ಈಗಲೂ ತಾಲೂಕು ಕಛೇರಿಗೆ ನಿತ್ಯ ಸುತ್ತಾಡುತ್ತಿದ್ದಾರೆ. ಈ ಹಿಂದಿನ ತಹಸೀಲ್ದಾರ್ ರೂಪ ಅವರು ಮಾಡಿರುವ ಕರ್ತವ್ಯ ಲೋಪದಿಂದಾಗಿ ನಮೂನೆ 50 ರ ಯಾವುದೇ ಅರ್ಜಿಗಳು ಅಕ್ರಮ ಸಕ್ರಮ ಸಮಿತಿಯ ಮುಂದೆ ಪರಿಶೀಲನೆಗೆ ಬರದಂತಾಗಿದೆ. ಇದನ್ನು ಸರಿಪಡಿಸಬೇಕಾದರೆ ನಮೂನೆ 50 ರ ಅಡಿ ಸಕ್ರಮಾತಿಗೆ ಅರ್ಜಿ ಸಲ್ಲಿಸಿರುವ ರೈತರಿಂದ ಜಿಲ್ಲಾಧಿಕಾರಿಗಳಿಗೆ ಪುನರ್ ಪರಿಶೀಲನೆಗಾಗಿ ಅಪೀಲು ಸಲ್ಲಿಸಬೇಕಾಗಿದೆ. ಆದ ಕಾರಣ ನಮೂನೆ 50 ರ ಅಡಿ ಸಕ್ರಮಾತಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರು ತಮ್ಮ ದಾಖಲಾತಿಗಳೊಂದಿಗೆ ಮೇ, 05 ಸೋಮುವಾರ ತಾಲೂಕು ಕಛೇರಿಗೆ ಬಂದರೆ ನಾವು ಮೂರು ಜನ ಸಮಿತಿಯ ಸದಸ್ಯರು ಅಲ್ಲಿದ್ದು ರೈತರಿಂದ ಮಾಹಿತಿ ಪಡೆದು ನಮೂನೆ 50 ಅರ್ಜಿಗಳ ಪುನರ್ ಪರಿಶೀಲನೆಗೆ ಜಿಲ್ಲಾಧಿಕಾರಿಗಳೊಂದಿಗೆ ವ್ಯವಹರಿಸಲು ಸಹಕಾರಿಯಾಗುತ್ತದೆ.

ನಮೂನೆ 50 ರ ಅರ್ಜಿಗಳ ಪುನರ್ ಪರಿಶೀಲನೆಯಾಗದಿದ್ದರೆ ತಹಸೀಲ್ದಾರರ ಸುಳ್ಳು ವರದಿಯ ಪ್ರಕಾರ ಎಲ್ಲಾ ಅರ್ಜಿಗಳು ವಿಲೇಯಾಗಿರುವುದರಿಂದ ಅವು ಅಕ್ರಮ ಸಕ್ರಮ ಸಮಿತಿಯ ಮುಂದೆ ಬರುವುದಿಲ್ಲ. ಇದರಿಂದ ತಾಲೂಕಿನ ನೂರಾರು ರೈತರು ತಮ್ಮ ಅನುಭವದ ಜಮೀನುಗಳ ಸಕ್ರಮಾತಿ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿ.ಎಲ್.ದೇವರಾಜು ತಿಳಿಸಿದರು.
ಶಾಸಕರ ವಿರುದ್ದ ಅಸಮಾಧಾನ: ಅಕ್ರಮ ಸಕ್ರಮ ಸಮಿತಿಗೆ ಕ್ಷೇತ್ರದ ಶಾಸಕರು ಅಧ್ಯಕ್ಷರು. ಆದರೆ ಶಾಸಕ ಹೆಚ್.ಟಿ.ಮಂಜು ಸಕಾಲಕ್ಕೆ ಸಭೆಗೆ ಬಾರದೆ ಸದಸ್ಯರನ್ನು ಗಂಟೆಗಟ್ಟಲೆ ಕಾಯಿಸುತ್ತಿದ್ದಾರೆ. ಅಕ್ರಮ ಸಕ್ರಮ ಸಮಿತಿಯ ಸಭೆಗೆ ಸರ್ಕಾರದಿಂದ ಅಧಿಕೃತವಾಗಿರುವ ಆಪ್ತ ಸಹಾಯಕರೊಬ್ಬರು ಮಾತ್ರ ಆಗಮಿಸಬಹುದು. ಉಳಿದಂತೆ ಪತ್ರಕರ್ತರೂ ಸೇರಿದಂತೆ ಇತರೆ ಯಾರಿಗೂ ಸಭೆಗೆ ಪ್ರವೇಶವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೂ ಸಹ ಸ್ಪಷ್ಡ ಮಾಹಿತಿ ನೀಡಿದ್ದಾರೆ. ಆದರೂ ಇಂದಿನ ಸಭೆಗೆ ಶಾಸಕರು ತಡವಾಗಿ ಆಗಮಿಸಿದ್ದಲ್ಲದೆ ನಿಯಮ ಮೀರಿ ತಮ್ಮ ಖಾಸಗಿ ಆಪ್ತ ಸಹಾಯಕನನ್ನು ಸಭೆಗೆ ಕರೆ ತಂದಿದ್ದರು. ಇದನ್ನು ನಾವು ಪ್ರಶ್ನಿಸಿ ಖಾಸಗಿ ಆಪ್ತ ಸಹಾಯಕನನ್ನು ಹೊರಗೆ ಕಳುಹಿಸುವಂತೆ ಮನವಿ ಮಾಡಿದರೂ ಶಾಸಕರು ಸಭಾ ನಿಯಮ ಪಾಲಿಸಲಿಲ್ಲ.
ಶಾಸಕರ ಈ ಧೋರಣೆಯನ್ನು ವಿರೋಧಿಸಿ ಸಮಿತಿಯ ಸದಸ್ಯರಾದ ನಾನು, ಬಸ್ತಿ ರಂಗಪ್ಪ ಮತ್ತು ಕೋಮಲ ರಾಯಪ್ಪ ಸಭೆಯಿಂದ ಹೊರ ಬಂದಿದ್ದೇವೆ. ಶಾಸಕರ ವರ್ತನೆಯಿಂದ ಅಕ್ರಮ ಸಕ್ರಮ ಸಭೆಯಲ್ಲಿ ರೈತರ ಅರ್ಜಿಗಳ ವಿಲೇ ಮಾಡಲು ಆಗುತ್ತಿಲ್ಲ. ತಾಲೂಕಿನಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಅಕ್ರಮ ಸಕ್ರಮ ಸಮಿತಿಯ ಮುಂದಿವೆ. ಇಂದಿನ ಸಭೆಗೆ 70 ಅರ್ಜಿಗಳು ಬಂದಿದ್ದವು. ಆದರೆ ನಾವು ಸಭೆಯಿಂದ ಹೊರಬಂದ ಕಾರಣ ಯಾವುದೇ ಒಂದು ಅರ್ಜಿ ವಿಲೇವಾರಿ ಆಗಲ್ಲಿಲ್ಲ.
ತಾಲೂಕಿನಲ್ಲಿ ನೂರಾರು ಎಕರೆ ಗೋಮಾಳವಿದೆ. ಆದರೆ ತಾಲೂಕು ಆಡಳಿತ ತಾಲೂಕಿನಲ್ಲಿ ಕೇವಲ 500 ಎಕರೆ ಮಾತ್ರ ಗೋಮಾಳವಿದೆ ಎಂದು ಸರ್ಕಾರಕ್ಕೆ ಸುಳ್ಳು ವರದಿ ನೀಡಿದೆ. ತಾಲೂಕಿನ ಶ್ರವಣಹಳ್ಳಿಯಲ್ಲಿ 140 ಎಕರೆ ಗೋಮಾಳವಿದೆ. ಆದರೆ ಇಲ್ಲಿ ಕೇವಲ 2.5 ಎಕರೆ ಮಾತ್ರ ಗೋಮಾಳವಿದೆ ಎಂದು ಸುಳ್ಳು ವರದಿ ನೀಡಲಾಗಿದೆ. ಇದೇ ರೀತಿ ತಾಲೂಕಿನ ಮುರುಕನಹಳ್ಳಿಯಲ್ಲಿ 70 ಎಕರೆ ಗೋಮಾಳವಿದೆ. ಆದರೆ ಇಲ್ಲಿ ಕೇವಲ 10 ಎಕರೆ ಮಾತ್ರ ಗೋಮಾಳವಿದೆ ಎಂದು ವರದಿ ನೀಡಿದ್ದಾರೆ. ಇದೇ ರೀತಿ ತಾಲೂಕಿನ ಬಹುತೇಕ ಕಡೆ ನೂರಾರು ಎಕರೆ ಗೋಮಾಳವಿದ್ದರೂ ಅದರ ವರದಿ ನೀಡದೆ ಸುಳ್ಳು ವರದಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳು ಅನುಭವದಲ್ಲಿರುವ ರೈತರಿಗೆ ಭೂಮಿ ಮಂಜೂರಾತಿಯಾಗದಂತೆ ಅನ್ಯಾಯ ಮಾಡುತ್ತಿದ್ದಾರೆ.

ನಮೂನೆ 53 ರ ಅಡಿ ಗೋಮಾಳದ ಭೂಮಿಯಲ್ಲಿ ಅನುಭವದಲ್ಲಿರುವ ರೈತರು ಸಕ್ರಮಾತಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಆಯಾ ಗ್ರಾಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳದ ಬಗ್ಗೆ ತಪ್ಪು ವರದಿ ನೀಡಿರುವುದರಿಂದ ರೈತರ ಭೂ ಸಕ್ರಮಾತಿಗೆ ಅಡಚಣೆಯಾಗಿದೆ. ಸರ್ಕಾರಿ ಗೋಮಾಳದ ನೈಜ ಮಾಹಿತಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸಮಿತಿಯ ಮುಂದೆ ಮಂಡಿಸುವಂತೆ ಬಿ.ಎಲ್.ದೇವರಾಜು ಆಗ್ರಹಿಸಿದರಲ್ಲದೆ ಸರ್ಕಾರಿ ಗೋಮಾಳದ ಮಾಹಿತಿಯಂತೆಯೇ ಸರ್ಕರಿ ಬೀಳು ಜಮೀನಿನ ಮಾಹಿತಿಯನ್ನು ನೀಡುವಂತೆ ತಹಸೀಲ್ದಾರರಿಗೆ ಸಮಿತಿಯ ಪರವಾಗಿ ಪತ್ರ ಬರೆಯುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಬಸ್ತಿ ರಂಗಪ್ಪ, ಕೋಮಲ ರಾಯಪ್ಪ ಹಾಜರಿದ್ದರು.
– ಶ್ರೀನಿವಾಸ್ ಆರ್.