ಕೆ.ಆರ್.ಪೇಟೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ವತಿಯಿಂದ ನೂತನವಾಗಿ ಆರಂಭಿಸಲಾದ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀಧಿ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ದಾನ್ಯ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಸರ್ಕಾರವು ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಬೆಂಬಲ ಬೆಲೆಯಲ್ಲಿ ತೆರೆಯುತ್ತಿರುವುದು ಶ್ಲಾಘನೀಯವಾದುದು.
ಆದರೆ ಸಕಾಲದಲ್ಲಿ ಖರೀದಿ ಕೇಂದ್ರ ತೆರೆದರೆ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಪ್ರತಿ ಕ್ವಿಂಟಾಲ್ ರಾಗಿಗೆ 4290/- ರೂ ಹಾಗೂ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2300/- ರೂಗಳನ್ನು ನಿಗದಿ ಮಾಡಿದೆ. ಖರೀದಿ ಕೇಂದ್ರ ತಡವಾಗಿ ಆರಂಭಿಸಲಾಗಿರುವುದು ಕಡಿಮೆ ರೈತರಿಗೆ ಮಾತ್ರ ಅನುಕೂಲ ಆಗಲಿದೆ.
ಹೆಚ್ಚು ರೈತರಿಗೆ ಅನುಕೂಲವಾಗಬೇಕಾದರೆ ವರ್ಷವಿಡೀ ಖರೀದಿ ಕೇಂದ್ರಗಳನ್ನು ತೆರೆದಿರುವಂತೆ ಕ್ರಮ ವಹಿಸಬೇಕಾಗಿದೆ. ರೈತರು ಬೆಳೆ ಕಟಾವು ಮುಗಿದು ಎರಡ್ಮೂರು ತಿಂಗಳ ಬಳಿಕ ಖರೀದಿ ಕೇಂದ್ರ ತೆರೆದರೆ ರೈತರಿಗೆ ಯಾವುದೇ ಪ್ರಯೋಜವಾಗುವುದಿಲ್ಲ. ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾಗುತ್ತಿದ್ದಂತೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ.

ರೈತರು ಹವಾಮಾನಕ್ಕೆ ಅನುಗುಣವಾಗಿ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ನಿರ್ವಹಣೆ, ನೀರಿನ ಲಭ್ಯತೆಗಳ ಆಧಾರದ ಮೇಲೆ ಬೇರೆ ಬೇರೆ ಬೆಳೆ ಬೆಳೆಯಬೇಕು. ಸಮಗ್ರ ಕೃಷಿಗೆ ಒತ್ತುನೀಡಬೇಕು. ಸಮಗ್ರ ಕೃಷಿಯಿಂದ ವರ್ಷವಿಡಿ ಆಧಾಯ ಗಳಿಸಬಹುದು. ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಳೆದ ವರ್ಷದಿಂದ ಜಾರಿಗೆ ತರಲಾಗಿದೆ.
ಇದನ್ನು ಮೀರಿ ದಲ್ಲಾಳಿಗಳು ಖರೀದಿ ಕೇಂದ್ರದಲ್ಲಿ ಭಾಗಿದಾರರಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ಶೀಳನೆರೆ ಎಸ್.ಎಲ್. ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಎಪಿಎಂಸಿ ಕಾರ್ಯದರ್ಶಿ ಸತೀಶ್, ಎಂ.ಪಿ.ಎಂ.ಸಿ ಮಾಜಿ ಅಧ್ಯಕ್ಷ ನಾಗರಾಜೇಗೌಡ, ಮುಖಂಡರಾದ ಚಟ್ಟೇನಹಳ್ಳಿ ನಾಗರಾಜು, ಡಿ.ಎಸ್.ನಾಗೇಂದ್ರ, ಆಹಾರ ಇಲಾಖೆಯ ಅಧಿಕಾರಿ ನಟರಾಜ್, ಫೆಡರೇಷನ್ ವಿಭಾಗೀಯ ಮಾರಾಟ ವ್ಯವಸ್ಥಾಪಕ ವೆಂಕಟೇಶ್ ನಾಯಕ್, ಪಾಂಡವಪುರ ವ್ಯವಸ್ಥಾಪಕಿ ಶೀಲಾ, ಫೆಡರೇಷನ್ ಅಧಿಕಾರಿಗಳಾದ ರಘುಗೌಡ, ಮಧು, ಕಾರ್ತಿಕ್, ಉಗ್ರಣ ನಿಗಮ ಶಾಖಾ ವ್ಯವಸ್ಥಾಪಕ ಪ್ರದೀಪ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಇತರರಿದ್ದರು.
- ಶ್ರೀನಿವಾಸ ಆರ್. ಕೆ.ಆರ್.ಪೇಟೆ