ಕೆ.ಆರ್.ಪೇಟೆ, ಮೇ 21: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ-ಮಗು ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಏಳು ಎಕರೆ ಭೂಮಿಯನ್ನು ದಾನವಾಗಿ ನೀಡಿದ ಹೊಸಹೊಳಲಿನ ದಾನಿಯರಾದ ದಿವಂಗತ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರಿಡಬೇಕೆಂದು ಶಾಸಕ ಹೆಚ್.ಟಿ. ಮಂಜು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ದುಂಡುಶೆಟ್ಟಿ ಲಕ್ಷ್ಮಮ್ಮ ಅವರು ಹಲವು ದಶಕಗಳ ಹಿಂದೆ ಸರ್ಕಾರಿ ಆಸ್ಪತ್ರೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಭೂಮಿ ದಾನ ಮಾಡಿದ ಮಹಾನ್ ದಾನಿ. ಇಂತಹ ದಾನಿಗಳ ಸ್ಮರಣಾರ್ಥ ತಾಯಿ-ಮಗು ಆಸ್ಪತ್ರೆಗೆ ಅವರ ಹೆಸರಿಡುವುದು ಸಮಾಜದ ಕರ್ತವ್ಯ,” ಎಂದ ಅವರು ಹೇಳಿದರು. ಈ ಬಗ್ಗೆ ಸರ್ಕಾರಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯ ಸೇವೆಯ ಕುರಿತು ಕಟ್ಟುನಿಟ್ಟಾದ ಸೂಚನೆ
ಅಸ್ಪತ್ರೆಯ ಸಿಬ್ಬಂದಿ, ದಾದಿಯರು ಹಾಗೂ ಡಿ ಗ್ರೂಪ್ ನೌಕರರ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ರೋಗಿಗಳ ಜೊತೆ ಮೃದುವಾಗಿ ಹಾಗೂ ಸೌಜನ್ಯದಿಂದ ವರ್ತಿಸುವಂತೆ ಶಾಸಕರು ಸಲಹೆ ನೀಡಿದರು. “ವೈದ್ಯರು ನಿಸ್ವಾರ್ಥ ಸೇವೆ ಮಾಡುವುದರಿಂದ ಜನರ ನಂಬಿಕೆ ಸುಧಾರಿಸುತ್ತದೆ. ಅಗತ್ಯ ಔಷಧಿಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಕಳುಹಿಸದೇ ಆಸ್ಪತ್ರೆಯಲ್ಲಿಯೇ ನೀಡಬೇಕು. ಔಷಧಿಗಳ ಕೊರತೆಯಾಗದಂತೆ ಮುಂಗಡದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು,” ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ
“ಪ್ರತಿದಿನ ಒಳರೋಗಿಗಳ ಹಾಸಿಗೆ ಬದಲಿ ಮಾಡಬೇಕು. ಆಸ್ಪತ್ರೆ ಆವರಣ ಸ್ವಚ್ಛವಾಗಿರಬೇಕು. ಗರ್ಭಿಣಿ ಮಹಿಳೆಯರಿಗೆ ಹಾಗೂ ತುರ್ತು ಚಿಕಿತ್ಸೆಗಾಗಿ ಉಚಿತ ಆಂಬುಲೆನ್ಸ್ ಸೌಲಭ್ಯವನ್ನು ಸುಲಭವಾಗಿ ತಲುಪಿಸಬೇಕು,” ಎಂಬ ಸೂಚನೆಗಳು ಶಾಸಕರಿಂದ ಬಂದುವು.
ಸಭೆಗೆ ಮುನ್ನ ಶಾಸಕರು ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ನೇರ ಸಂಭಾಷಣೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.

ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಕೆ.ಆರ್. ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ. ಸುಷ್ಮಾ, ತಾ.ಆರೋಗ್ಯಾಧಿಕಾರಿ ಡಾ. ಅಜಿತ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್, ಹಾಗೂ ರಕ್ಷಾ ಸಮಿತಿಯ ಸದಸ್ಯರು, ವೈದ್ಯರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.