ಕೆ.ಆರ್.ಪೇಟೆ: ಸಿಎಂ ಮೂಡ ಪ್ರಕರಣದಲ್ಲಿ, ರಾಜ್ಯ ಸರ್ಕಾರ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನೇ ಹಿಡಿತಕ್ಕೆ ತೆಗೆದುಕೊಂಡು ಒತ್ತಡ ಹೇರುತ್ತಿದೆ. ಆ ಒತ್ತಡದಿಂದ ತನಿಖಾ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸತ್ಯವನ್ನು ಮಾತನಾಡಲು ಆಗುತ್ತಿಲ್ಲ. ಮೂಡ ಹಗರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು ಎಂದು ಕರ್ನಾಟಕ ಪ್ರದೇಶ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಅವರು ತಾಲ್ಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀ ದೇಮ್ಮನವರ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿ, ಬೋಳಮಾರನಹಳ್ಳಿ ಗ್ರಾಮದ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದೆ. ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳನ್ನು ದಾನಿಗಳ ನೆರವಿನಿಂದ ಜೀರ್ಣೋದ್ದಾರ ಮಾಡಿರುವುದು ಶ್ಲಾಘನೀಯ. ದೇವಾಲಯಗಳು, ಜಾತ್ರೆ-ರಥೋತ್ಸವಗಳು ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿವೆ ಹಾಗಾಗಿ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿ ಉಳಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಶ್ರೀ ಲಕ್ಷೀದೇವಮ್ಮನವರ ದೇವಾಲಯ ನಿರ್ಮಾಣ ಕಾರ್ಯಕ್ಕೆ ಹಾಗೂ ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ಸುಮಾರು 50ಲಕ್ಷ ರೂಪಾಯಿ ಅನುಧಾನ ನೀಡಿರುವುದು ಬೋಳಮಾರನಹಳ್ಳಿ ಗ್ರಾಮದ ಮೇಲೆ ನಮ್ಮ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ದೇವಾಲಯಗಳ ಸಂರಕ್ಷಿಸುವ ಜವಾಬ್ದಾರಿಯು ಪ್ರತಿಯೊಬ್ಬರ ಮೇಲಿದೆ ಎಂಬ ಮನೋಭಾವನೆಯಲ್ಲಿ ಒಗ್ಗಟ್ಟಿನಿಂದ ಶ್ರದ್ಧಾ ಭಕ್ತಿಯಿಂದ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಮ್ಮ ನವರ ದೇವಾಲಯವನ್ನು ನಿರ್ಮಾಣದ ಮೂಲಕ ನಮ್ಮ ಸನಾತನ ಪರಂಪರೆ ಉಳಿವಿಗೆ ಶ್ರಮಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಹಿರಿಯರಿಗೆ ಗೌರವಿಸುವಂತಾಗುವುದಲ್ಲದೇ ಮುಂದಿನ ಪೀಳಿಗೆಗಾಗಿ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ನಮ್ಮಲ್ಲಿ ಎಷ್ಟೆ ಕಷ್ಟ ಕಾರ್ಪಣ್ಯಗಳಿದ್ದರೂ ದೇವಾಲಯಗಳಿಗೆ ಒಮ್ಮೆ ಭೇಟಿ ಕೊಟ್ಟರೆ ಆ ದೇವಾಲಯಗಳು ಬದುಕಿಗೆ ಹೊಸ ಸಂದೇಶಗಳನ್ನು ನೀಡುತ್ತವೆ. ಯಾವುದೇ ಒಬ್ಬ ವ್ಯಕ್ತಿ ದೇವಾಲಯಗಳಿಗೆ ತೆರಳಿದರೆ ಆ ವ್ಯಕ್ತಿಯಲ್ಲಿ ಒಳ್ಳೆಯ ಸದ್ಭಾವನೆಗಳು ಮೂಡುತ್ತವೆ. ಇದು ಮಾತ್ರವಲ್ಲ, ಅವರಲ್ಲಿ ಸಂಸ್ಕಾರ ಸಹ ಮೂಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು , ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೋಳಮಾರನಹಳ್ಳಿ ಮಂಜುನಾಥ್, ಉದಯಶಂಕರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ, ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಮನ್‌ಮುಲ್ ಅಭ್ಯರ್ಥಿ ಬೋರ್‌ವೆಲ್ ಮಹೇಶ್, ಪಿ.ಎ.ಸಿ.ಎಸ್. ನಿರ್ದೇಶಕ ಶೇಖರ್, ಮುಖಂಡರಾದ ಬಿ.ಎಸ್.ಮಂಜುನಾಥ್, ಚಿಕ್ಕಲಿಂಗೇಗೌಡ, ಕಿರಣ್, ಗುರುಲಿಂಗೇಗೌಡ, ಬಿ.ಎಸ್.ಪುಟ್ಟೇಗೌಡ, ಚಂದ್ರಶೇಖರ್, ಶಂಕರಲಿಂಗೇಗೌಡ, ಪದ್ಮನಾಭೇಗೌಡ, ಅಣ್ಣಾಸ್ವಾಮಿ, ಬಿ.ಎನ್.ಬಸವೇಗೌಡ, ಕಾಯಿ ರಾಮಣ್ಣ, ಸ.ಮಂಜಣ್ಣ, ಮ.ರಾಮಕೃಷ್ಣಣ್ಣ, ಗುರುಲಿಂಗಣ್ಣ, ಬಿ.ಕೆ.ಶ್ರೀನಿವಾಸ್, ಶಿಕ್ಷಕ ಹರೀಶ್, ಪತ್ರಿಕಾ ಪ್ರತಿನಿಧಿ ನಿಂಗೇಗೌಡ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.