ಕೆ.ಆರ್.ಪೇಟೆ-ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ತಮ್ಮಪ್ಪ ಶೆಟ್ಟರಿಗೆ ಹಿರಿಯ ನಾಗರೀಕ ವೇದಿಕೆಯಿಂದ ಹೃದಯಸ್ಪರ್ಷಿ ಅಭಿನಂದನೆ

ಕೆ.ಆರ್.ಪೇಟೆ-ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿಯಾಗಿ ಚಿಂತಿಸಿ, ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡಿರುವ ಶತಾಯುಷಿಗಳಾದ ತಮ್ಮಪ್ಪಶೆಟ್ಟರಂತಹ ಅಪರೂಪದ ವ್ಯಕ್ತಿಗಳು ಬೇಕಾಗಿದ್ದಾರೆ ಎಂದು ತಾಲೂಕಿನ ಹಿರಿಯ ರಾಜಕೀಯ ಮುತ್ಸದ್ಧಿ ನಾಯನಕನಹಳ್ಳಿ ಬಿ.ನಂಜಪ್ಪ ಹೇಳಿದರು.

ಅವರು ಪಟ್ಟಣದ ಹೊಸಹೊಳಲು ರಸ್ತೆಯ ಜಯನಗರ ಬಡಾವಣೆಯಲ್ಲಿರುವ ಶತಾಯುಷಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ.ತಮ್ಮಪ್ಪಶೆಟ್ಟರನ್ನು ಹಿರಿಯ ನಾಗರೀಕರ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಸ್ವಾರ್ಥವೇ ತುಂಭಿರುವ ಇಂದಿನ ಸಮಾಜದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿ, ಸರಳವಾಗಿ ಜೀವನ ನಡೆಸಿ ಪ್ರಗತಿಪರ ಕೃಷಿಕರಾಗಿ, ಸಮಾಜಮುಖಿ ಚಿಂತಕರಾಗಿ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ನೇತಾರರೂ ಆಗಿರುವ ತಮ್ಮಪ್ಪಶೆಟ್ಟಿ ಅವರು ಸಾರ್ಥಕವಾದ ನೂರು ವರ್ಷಗಳನ್ನು ಸಂಪೂರ್ಣಗೊಳಿಸುತ್ತಿದ್ದು 2025ರ ಜುಲೈ 25ಕ್ಕೆ 101ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಹೆಚ್.ಡಿ.ಚೌಡಯ್ಯ, ಹೊಳೆನರಸೀಪುರದ ಜಿ.ಪುಟ್ಟಸ್ವಾಮಿಗೌಡ, ಬಳ್ಳೇಕೆರೆ ಎಂ.ಪುಟ್ಟಸ್ವಾಮಿಗೌಡ ಹಾಗೂ ರಾಜ್ಯದ ಹಿರಿಯ ಸಹಕಾರಿ ಧುರೀಣರಾಗಿದ್ದ ಮಾಜಿಶಾಸಕ ಎಸ್.ಎಂ.ಲಿoಗಪ್ಪ ಅವರ ಒಡನಾಡಿಯಾಗಿದ್ದ ತಮ್ಮಪ್ಪನವರು ತಮ್ಮ ಜೀವನದುದ್ದಕ್ಕೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸೇವೆ ಎಂಬ ಪದಕ್ಕೆ ಸಾರ್ಥಕತೆಯನ್ನು ತಂದು ಕೊಟ್ಟಿದ್ದು ಇತರರಿಗೆ ಮಾದರಿಯಾದ ಜೀವನವನ್ನು ನಡೆಸಿದ್ದಾರೆ. ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರಾಗಿದ್ದ ಕೆ.ಜೆ.ಬೋರಲಿಂಗೇಗೌಡ, ಹೆಚ್.ಟಿ.ನಾರಾಯಣಶೆಟ್ಟಿ ಅವರ ಮಾರ್ಗದರ್ಶಕರಾಗಿ ಮಾದರಿ ಪಟ್ಟಣದ ನಿರ್ಮಾಣಕ್ಕೆ ತಮ್ಮ ಹೆಗಲು ನೀಡಿ ದುಡಿದಿದ್ದಾರೆ ಎಂದು ಶ್ರೀಯುತರ ಸೇವೆಯನ್ನು ನಂಜಪ್ಪ ಸ್ಮರಿಸಿದರು.

ಪಟ್ಟಣದ ಖ್ಯಾತ ವಕೀಲರು ಹಾಗೂ ನೋಟರಿಗಳಾದ ಎಸ್.ಸಿ.ವಿಜಯಕುಮಾರ್ ಮಾತನಾಡಿ, ಸ್ವಚ್ಛ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸಿರುವ ತಮ್ಮಪ್ಪಶೆಟ್ಟಿ ಅವರಂತಹ ಅಪರೂಪದ ಮಾಣಿಕ್ಯಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕಶಕ್ತಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮಾದರಿ ಕೃಷಿಕರಾಗಿ ಕೆಲಸ ಮಾಡಿರುವ ತಮ್ಮಪ್ಪ ಅವರ ಜೀವನದ ಆದರ್ಶಗಳನ್ನು ಇಂದಿನ ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕರೆ ನೀಡಿದರು.

ಅಭಿನಂದನೆ ಸ್ವೀಕರಿಸಿದ ತಮ್ಮಪ್ಪಶೆಟ್ಟಿ ಅವರು ಮಾತನಾಡಿ, ನಮ್ಮ ಕಾಲವೇ ಬೇರೆ ಇಂದಿನ ಕಾಲವೇ ಬೇರೆಯಾಗಿದೆ. ನಾವೆಲ್ಲರೂ ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸಿ ಸಂಸ್ಕಾರದ ಹಿಂದೆ ಹೋಗುತ್ತಿದ್ದೆವು ಆದರೆ ಇಂದಿನ ಪರಿಸ್ಥಿತಿ ಹಾಗೂ ವಾತಾವರಣವೇ ಅದಲು ಬದಲಾಗಿದೆ. ಇಂದಿನ ಯುವಜನರು ಮಾನವತೆ ಹಾಗೂ ಸೇವೆಗೆ ಬೆಲೆ ನೀಡುತ್ತಿಲ್ಲ, ಎಲ್ಲರೂ ಶ್ರಮಪಡದೇ ಶ್ರೀಮಂತರಾಗಬೇಕು ಎಂಬ ಹಗಲುಗನಸನ್ನು ಬೆನ್ನುಹತ್ತಿದ್ದಾರೆ. ಇದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ನಿವೃತ್ತ ಇಂಜಿನಿಯರ್ ಈರಣ್ಣಗೌಡ, ಡಿಸಿಸಿ ಬ್ಯಾಂಕಿನ ವಿಶ್ರಾಂತ ವ್ಯವಸ್ಥಾಪಕ ಬಸವರಾಜು, ಹೊಸಹೊಳಲು ವಿಶ್ವನಾಥ್, ಪಾಂಡುರoಗ, ಶ್ರೀನಿವಾಸಮೂರ್ತಿ, ಕೆ.ಆರ್.ನೀಲಕಂಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

——-ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?