ಕೆ.ಆರ್.ಪೇಟೆ-ಕಿರಿಯ ವಯಸ್ಸಿನಲ್ಲಿಯೇ ಜಿ.ಸುರೇಂದ್ರ ಅದ್ಭುತ ಸಾಧನೆ-ಕೃಷಿ ಕೂಲಿ ಕಾರ್ಮಿಕರ ಮಗ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆ

ಕೆ.ಆರ್.ಪೇಟೆ-ಪಟ್ಟಣದ ಜೆ.ಎಂ.ಎಫ್.ಸಿ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಸುರೇಂದ್ರ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಉತ್ತಮ ಸಾಧನೆ ಮಾಡಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯ ಊದವಾರಿಪಲ್ಲಿ ಗ್ರಾಮದ ಕೂಲಿ ಮಾಡಿ ಜೀವನ ಸಾಗಿಸುವ ಗಂಗುಲಯ್ಯ ಹಾಗೂ ಕಮಲಮ್ಮ ದಂಪತಿಗಳ ಪುತ್ರರಾದ ಜಿ.ಸುರೇಂದ್ರ ಅವರು ಒಂದರಿoದ 7ನೇ ತರಗತಿಯವರೆಗೆ ಹೇರೋಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದಾರೇ.ನಂತರ ಪೋಷಕರ ಸಹಕಾರದಿಂದ ಬೆಂಗಳೂರಿನ ವಿಜಯನಗರದ ಉದಯ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲದಲ್ಲಿ ಬಿಎ ಪದವಿ ಪಡೆದು ಅಲ್ಲಿಯೇ ಇರುವ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 2014ರಂದು ವಕೀಲ ವೃತ್ತಿಗೆ ಪಾದಾರ್ಪಣೆ ಮಾಡಿ ಬೆಂಗಳೂರಿನ ಖ್ಯಾತ ವಕೀಲರಾದ ಹೆಚ್.ಎಸ್.ರಾಘವೇಂದ್ರ ಅವರ ಬಳಿ ಕಿರಿಯ ವಕೀಲರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

2022ರಲ್ಲಿ ಸರ್ಕಾರಿ ಅಭಿಯೋಜಕರ ಹುದ್ದೆಗೆ ಕರೆದಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2023ರಲ್ಲಿ ಕೆ.ಆರ್.ಪೇಟೆಯ ಪಟ್ಟಣದ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿ ತಮ್ಮ ಬಡ ತಂದೆ-ತಾಯಿಗಳಿಗೆ ಕೀರ್ತಿ ತಂದಿದ್ದಾರೆ.

ಪಟ್ಟಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಿರುವ ಸುರೇಂದ್ರ ಅವರ ನ್ಯಾಯಾಲಯಕ್ಕೆ ನ್ಯಾಯವನ್ನು ಅರಸಿ ಬರುವ ನೊಂದ ಜನರ ಧನಿಯಾಗಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತ ಬಂದಿದ್ದಾರೆ.

ಕಾನೂನು ಅರಿವು-ನೆರವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಗ್ರಾಮೀಣ ಪ್ರದೇಶದ ಬಡಜನರು ಹಾಗೂ ನೊಂದವರು ಉಚಿತವಾಗಿ ಕಾನೂನು ನೆರವನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಲು ಕಾರಣರಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ನೋಟರಿಗಳಾದ ಎನ್.ಆರ್.ರವಿಶಂಕರ್ ಹಾಗೂ ವಕೀಲ ನಯಾಜ್‌ಪಾಷಾ ಅವರು ನೂತನ ಜಡ್ಜ್ ಜಿ.ಸುರೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

——–—ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?