ಕೆ ಆರ್ ಪೇಟೆ– ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ. ರಮೇಶ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿ ಬಲ್ಲೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಂಸ್ಕಾರ ಗುಣಗಳನ್ನು ಮೈಗೂಡಿಸಿಕೊಂಡರೆ ದೊಡ್ಡವರಾದ ಮೇಲೆ ಅತ್ಯಂತ ಗುಣವಂತನಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರಷ್ಟೇ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ.
ನಮ್ಮ ಗ್ರಾಮಸ್ಥರಲ್ಲಿ ನನ್ನ ಮನವಿ ಏನೆಂದರೆ ನಮ್ಮೂರ ಶಾಲೆ ಎಂಬ ಭಾವನೆ ಮೂಡಬೇಕು.ಪೋಷಕರು ಮೊದಲಿಗೆ ಖಾಸಗೀ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡದೇ ನಮ್ಮ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ್ದಲ್ಲದೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲ.

ನಮ್ಮೂರ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಕಟ್ಟಡಕ್ಕೆ ಸುಣ್ಣಬಣ್ಣಗಳಿಂದ ಕೂಡಿರುವುದರಿಂದ ಕಂಗೊಳಿಸುತ್ತಿದೆ.ಅಲ್ಲದೆ ನಮ್ಮೂರ ಹೆಮ್ಮೆಯ ಸುಪುತ್ರ ಶಾಲೆ ಹಾಗೂ ಮಕ್ಕಳಿಗೋಸ್ಕರ ಅನುಕೂಲಕ್ಕೆ ಅನುಗುಣವಾಗಿ ಬ್ಯಾಂಡ್ ಸೆಟ್ ಅನ್ನು ಉಚಿತವಾಗಿ ಕೆ ಇ ಬಿ ಕಂಟ್ರಾಕ್ಟರ್ ಬಲ್ಲೇನಹಳ್ಳಿ ರಾಮು ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ.
ಅಲ್ಲದೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮಕ್ಕೆ ತಮ್ಮ ಕೈಲಾದ ಸಹಾಯಮಾಡುವ ಮೂಲಕ ನಮ್ಮೂರ ಶಾಲೆಯನ್ನು ಉಳಿಸುವ ದೃಷ್ಟಿಯಿಂದ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಬಲ್ಲೇನಹಳ್ಳಿ ರಮೇಶ್ ಖುಷಿಪಟ್ಟರು.
ಶಾಲೆಗೆ ಬ್ಯಾಂಡ್ ಸೆಟ್ ಅನ್ನು ಕೊಡುಗೆಯಾಗಿ ನೀಡಿದ ಉದ್ಯಮಿ,ಗ್ರಾಮದ ಸುಪುತ್ರರು ಹಾಗೂ ಪ್ರಥಮ ದರ್ಜೆ ಎಲೆಕ್ಟ್ರಿಕಲ್ ಮತ್ತು ಸಿವಿಲ್ ಗುತ್ತಿಗೆದಾರಾದ ಬಲ್ಲೇನಹಳ್ಳಿ ಆಡುನಿಂಗಣ್ಣನ ಬಿ.ಎಸ್.ರಾಮು ಮಾತನಾಡಿ ನಾವು ಎಲ್ಲೇ ಇರಲಿ ಹೇಗೆ ಇರಲಿ ಒಟ್ಟಿನಲ್ಲಿ ಕನ್ನಡಿಗರಾಗಿರಿ ಕನ್ನಡವನ್ನು ಮರೆಯದಿರಿ ಎಂಬ ಹೇಳಿಕೆಯನ್ನು ನೀಡಿರುವ ಕುವೆಂಪು ಅವರ ವಾಕ್ಯದಂತೆ ಕನ್ನಡ ಶಾಲೆಗಳನ್ನು ಅದರಲ್ಲೂ ನಮ್ಮೂರ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಇರಬೇಕು.

ನಾವು ಯಾವುದೇ ರಂಗದಲ್ಲಿ ಸಾಧನೆ ಮಾಡಿದರೆ ಅದು ನಮಗೆ ಸೀಮಿತವಾಗಬಾರದು.ನಾವು ಓದಿದ ಶಾಲೆ, ಹುಟ್ಟೂರಿಗೆ ಏನಾದರೂ ನಮ್ಮ ಸೇವೆ ನಿರಂತರವಾಗಿ ಇರಬೇಕು. ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಬಡವರ ಮಕ್ಕಳು, ರೈತರ ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ.
ಅಂತಹ ಮಕ್ಕಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡುವುದು ನಮ್ಮ ಧರ್ಮ ಎಂದರಲ್ಲದೇ ನಮ್ಮೂರಿನಲ್ಲಿರುವ ಪ್ರೈಮರಿ,ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ನನ್ನ ಸಹಕಾರ ನಿರಂತರವಾಗಿ ಇರುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಬಲ್ಲೇನಹಳ್ಳಿ ರಾಮು ಅಭಯ ನೀಡಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಎಲೆಕ್ಟ್ರಿಕಲ್ ಮತ್ತು ಸಿವಿಲ್ ಗುತ್ತಿಗೆದಾರಾದ ಬಲ್ಲೇನಹಳ್ಳಿ ಆಡುನಿಂಗಣ್ಣನ ಬಿ.ಎಸ್.ರಾಮು, ತಾಲ್ಲೂಕು ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಮಾರ್, ನಂದೀಶ್,ಮುಖ್ಯ ಶಿಕ್ಷಕಿ ಮೀನಾಕ್ಷಿ,ಲಲಿತಾ,ರಾಮು,ಎಸ್ ಡಿಎಂಸಿ ಅಧ್ಯಕ್ಷ ಸುಧಾಕರ್, ಉಪಾಧ್ಯಕ್ಷೆ ರಾಧಾಮಣಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಗ್ರಾಮದ ಮುಖಂಡರು ಮತ್ತು ಪೋಷಕರು ಸಾವರ್ಜನಿಕರು ಭಾಗವಹಿಸಿದ್ದರು.