ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ನಗರೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಕೆ.ಆರ್. ಪೇಟೆ ಕಾವೇರಿ ಕಣ್ಣಿನ ಆಸ್ಪತ್ರೆ ಹಾಗೂ ಮಂಡ್ಯ ಡಿ.ಆರ್.ಎಂ. ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ಮುಖ್ಯವಾಗಿದೆ. ಗ್ರಾಮೀಣ ಭಾಗದ ಜನತೆ ಸದಾ ಕೃಷಿ ಚಟುವಟಿಯಲ್ಲಿ ನಿರತವಾಗಿದ್ದು, ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು. ಕನಿಷ್ಠ 1ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾಜಾ ತರಕಾರಿ ಸೊಪ್ಪು ಹಾಗೂ ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವಿಸಬೇಕು. ರೋಗ ಬಂದಮೇಲೆ ಚಿಕಿತ್ಸೆ ಪಡೆಯುವ ಬದಲು ರೋಗಗಳು ಬಾರದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ ಅವರು ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಖಾವಂದರಾದ ಶ್ರೀ ವೀರೇಂದ್ರಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆ ಅಮ್ಮನವರ ವಿಶೇಷ ಆಸಕ್ತಿಯಿಂದ ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

ಗ್ರಾಮೀಣ ಭಾಗದ ಜನರು ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಂಡು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ತಮ್ಮ ಗ್ರಾಮದ ಡೇರಿ ಅಥವಾ ಸೊಸೈಟಿಯಲ್ಲಿ ಯಶಸ್ವನಿ ಕಾರ್ಡ್ ನೊಂದಣೀ ಮಾಡಿಸಿಕೊಂಡರೆ ಉಚಿತವಾಗಿ ಆಸ್ಪತ್ರೆಯಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಆಪರೇಷನ್ ಮಾಡಿಕೊಳ್ಳಬಹುದು ಇದರಿಂದ ಲಕ್ಷಾಂತರ ರೂ ಉಳಿತಾಯ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುನಿತಾ ದ್ಯಾವಯ್ಯ, ಗ್ರಾ.ಪಂ.ಸದಸ್ಯರಾದ ನಂಜೇಗೌಡ, ಶ್ರೀನಿವಾಸ್. ಆರ್, ತಾಲ್ಲೂಕು ಯೋಜನಾಧಿಕಾರಿ ತಿಲಕ್ ರಾಜ್, ವೈದ್ಯರಾದ ಡಾ.ಸೌಮ್ಯ, ಡಾ.ಚಂದನ್, ಮೇಲ್ವಿಚಾರಕಿ ಯೋಗೇಶ್ವರಿ, ವಿಮಾ ಸಮನ್ವಯಾಧಿಕಾರಿ ಚಂದ್ರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುಮಾರು 100ಕ್ಕು ಹೆಚ್ವು ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು. ಶಿಬಿರದಲ್ಲಿ ಕಣ್ಣು ತಪಾಸಣೆ, ಇಸಿಜಿ, ಬಿಪಿ, ಶುಗರ್ ತಪಾಸಣೆ ನಡೆಸಿ ಚಿಕಿತ್ಸೆ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಯಿತು.
– ಶ್ರೀನಿವಾಸ್ ಆರ್.