ಕೆ.ಆರ್.ಪೇಟೆ-ಪಂಚಭೂತೇಶ್ವರ ಮಠ-ಡಿ.14 ರಂದು ಸರ್ವಧರ್ಮ ಸಮ್ಮೇಳನ-ಚುಂಚಶ್ರೀಗಳಿಗೆ ಆಹ್ವಾನ ನೀಡಿದ ಶ್ರೀ ರುದ್ರಮುನಿ ಸ್ವಾಮೀಜಿ

ಕೆ.ಆರ್.ಪೇಟೆ-ತಾಲೂಕಿನಲ್ಲಿ ಪ್ರಕೃತಿಯನ್ನು ದೇವರೆಂದು ಆರಾಧಿಸುವ, ಪಂಚಭೂತಗಳಿಗೆ ವಿಶೇಷ ಪೂಜೆ ಸಲ್ಲಿಸುವ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದ 10ನೇ ವರ್ಷದ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಸಮ್ಮೇಳನದ ನೇತೃತ್ವ ವಹಿಸುವಂತೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರುಗಳಾದ ಡಾ.ಶ್ರೀ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಶ್ರೀ ರುದ್ರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿದ್ದ ಭಕ್ತರು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀ ರುದ್ರಮುನಿ ಸ್ವಾಮೀಜಿಗಳು,ಮೌಢ್ಯಗಳು ಹಾಗೂ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಜಾಗೃತಿ ಮೂಡಿಸಿ ಆಡಂಬರದ ಪೂಜೆಗಳಿಂದ ದೇವರು ಸಾಕ್ಷಾತ್ಕಾರವಾಗುವುದಿಲ್ಲ ಎಂಬ ವೈಜ್ಷಾನಿಕ ಮನೋಭಾವನೆಯನ್ನು ತುಂಬುತ್ತಿರುವ ಶ್ರೀ ಪಂಚಭೂತೇಶ್ವರ ಕ್ಷೇತ್ರದಲ್ಲಿ ದೇವಾಲಯ ಹಾಗೂ ಶ್ರೀಮಠವು ಆರಂಭವಾಗಿ ಹತ್ತು ವರ್ಷಗಳು ಸಂಪೂರ್ಣಗೊoಡಿರುವ ಹಿನ್ನೆಲೆಯಲ್ಲಿ ಬರುವ ಡಿಸೆಂಬರ್ 14ರ ಶನಿವಾರ ಮತ್ತು 15ರ ಭಾನುವಾರ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ ಪುರಸ್ಕಾರಗಳು, ಹೋಮ ಹವನಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪಂಚಶ್ರೀ ಪ್ರಶಸ್ತಿ ಪ್ರಧಾನ, ಪೌರಕಾರ್ಮಿಕರು ಹಾಗೂ ಹಿರಿಯ ನಾಗರೀಕರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಡಿ.14ರ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಪೌರಕಾರ್ಮಿಕರು ಹಾಗೂ ಹಿರಿಯ ನಾಗರೀಕರನ್ನು ಅಭಿನಂದಿಸಿ ಗೌರವಿಸುವರು.15ರಂದು ನಡೆಯಲಿರುವ ಧಾರ್ಮಿಕ ಸಮ್ಮೇಳನದಲ್ಲಿ ಆದಿಚುಂಚನಗಿರಿ ಸುಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಗಳು ನೇತೃತ್ವ ವಹಿಸಿದರೆ, ಸುತ್ತೂರು ಮಠದ ಶ್ರೀ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಹಳು, ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಸುಕ್ಷೇತ್ರ ಕೋಡಿಮಠದ ಡಾ.ಶ್ರೀ ಶಿವಯೋಗಿರಾಜೇಂದ್ರ ಮಹಾಸ್ವಾಮೀಜಿಗಳು, ಕೃಷ್ಣರಾಜನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಗಳು, ಶ್ರವಣಬೆಳಗೊಳ ಜೈನ ಮಠದ ಶ್ರೀ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು, ಚಂದ್ರವನದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು, ಬೇಬಿಬೆಟ್ಟದ ಶ್ರೀ.ಶಿವಬಸವ ಸ್ವಾಮೀಜಿಗಳು, ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭೂನಾಥಸ್ವಾಮೀಜಿಗಳು, ಕೊರಟಗೆರೆಯ ಕುಂಚಟಿಗರ ಮಹಾಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿಗಳು, ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿ ಸಾನಿಧ್ಯವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಶೇಷಚೇತನ ಕ್ರೀಡಾಪಟು ಮದ್ದೂರಿನ ಡಾ.ರಾಜಣ್ಣ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್, ಮಹಿಳಾ ಹೋರಾಟಗಾರ್ತಿ ಡಾ.ರಜನಿರಾಜ್, ಸಮಾಜಸೇವಕ ಮೊಟ್ಟೆಮಂಜು ಹಾಗೂ ಅವರಿಗೆ ಪಂಚಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವರಾದ ಡಾ.ನಾರಾಯಣಗೌಡ, ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬೇರ, ನಾಡಿನಲ್ಲಿ ಮೂಡನಂಬಿಕೆ ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತಿರುವ ಡಾ.ಹುಲಿಕಲ್ ನಟರಾಜ್, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಓ ಶೇಖ್ ತನ್ವೀರ್‌ಆಸೀಫ್, ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಶೀಲ್ದಾರ್ ಡಾ.ಅಶೋಕ್, ತಾ.ಪಂ ಇಓ ಸುಷ್ಮಾ, ಪೋಲಿಸ್ ಇನ್ಸ್ಪೆಕ್ಟರ್ ರೇವತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಝೀ ಕನ್ನಡ ವಾಹಿನಿಯ ಕಾಮಿಡಿ ಖಿಲಾಢಿಗಳು ಖ್ಯಾತಿಯ ಗಿಲ್ಲಿನಟ, ಚಂದ್ರಪ್ರಭ, ವಾಣಿ, ಪುಟ್ಟರಾಜು, ಕೆ.ಆರ್.ಪೇಟೆ ಶಿವರಾಜ್ ಅವರು ಹಾಸ್ಯ ಕಾರ್ಯಕ್ರಮ ನೀಡಿದರೆ ನೃತ್ಯ ಪಯಣ ತಂಡದ ಕೌಸ್ತುಭ ಕೇಶವಸ್ವಾಮಿ ನೇತೃತ್ವದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರೆ, ಕಡಬಗೆರೆ ನಾಗರಾಜ್ ಅವರು ಜಾದೂ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ಕೊಟ್ಟರು.

——-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?