ಕೆ.ಆರ್.ಪೇಟೆ: ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಶ್ರೀನಿವಾಸ್ ಅವರ ವಿರುದ್ದ ಕೆಲವರು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯ ವಿರುದ್ದ ನಡೆಸುತ್ತಿರುವ ಪಿತೂರಿಯನ್ನು ರೈತಸಂಘ ಪ್ರಭಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ. ಶ್ರೀನಿವಾಸ್ ದಕ್ಷವಾಗಿ, ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಪಾಂಡವಪುರ ಉಪ ವಿಭಾಗಾಧಿಕಾರಿಗಳಾಗಿ ಕರ್ತವ್ಯ ವಹಿಸಿಕೊಂಡ ನಂತರ ಪ್ರತಿ ಶುಕ್ರವಾರ ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿ ರೈತಾಪಿ ವರ್ಗದವರ ಹಾಗೂ ಜನ ಸಾಮಾನ್ಯರ ಕುಂದು ಕೊರತೆಗಳನ್ನು ಖುದ್ದು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ದ ಇರುವ ಡಾ.ಶ್ರೀನಿವಾಸ್ ಅವರು ಪ್ರತಿ ಶುಕ್ರವಾರ ಕೆ.ಆರ್.ಪೇಟೆಯಲ್ಲಿ ಎ.ಸಿ.ಕೋರ್ಟ್ ನಡೆಸಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಹಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸಾವಿರಾರು ಕಡತಗಳನ್ನು ವಿಲೇವಾರಿ ಮಾಡಿ ರೈತ ಸಮುದಾಯಕ್ಕೆ ನೆರವಾಗುತ್ತಿದ್ದಾರೆ.
ಕಳೆದ 06 ತಿಂಗಳಲ್ಲಿ ತಾಲೂಕಿನ ರೈತರ ಸುಮಾರು 850 ಕ್ಕೂ ಹೆಚ್ಚು ಕಡತಗಳನ್ನು ವಿಲೇ ಮಾಡಿರುವ ಹೆಗ್ಗಳಿಕೆ ಶ್ರೀನಿವಾಸ್ ಅವರದ್ದು. ಇಂತಹ ಪ್ರಾಮಾಣಿಕ ಅಧಿಕಾರಿ ಕನಿಷ್ಠ ಇನ್ನೂ ಎರಡು ವರ್ಷಗಳ ಕಾಲ ನಮ್ಮ ಪಾಂಡವಪುರ ಉಪ ವಿಭಾಗದಲ್ಲಿಯೇ ಉಳಿಸಿಕೊಳ್ಳಬೇಕಾದ ಅಗತ್ಯತೆ ರೈತ ಸಮುದಾಯಕ್ಕಿದೆ. ಉಪ ವಿಭಾಗಾಧಿಕಾರಿಗಳ ಪ್ರಾಮಾಣಿಕ ಸೇವೆಯಿಂದ ವಿಚಲಿತರಾಗಿರುವ ಕೆಲವು ಮದ್ಯವರ್ತಿಗಳು ಇವರ ವಿರುದ್ದ ಷಡ್ಯಂತ್ರ ನಡೆಸಿ ಅವರ ಪ್ರಾಮಾಣಿಕತೆಗೆ ಮಸಿ ಬಳಿದು ವರ್ಗಾವಣೆ ಮಾಡಿಸುವ ಪಿತೂರಿ ನಡೆಸುತ್ತಿದ್ದಾರೆ. ಉಪ ವಿಭಾಗಾಧಿಕಾರಿಗಳು ಪಿತೂರಿದಾರರ ಒಳಸಂಚಿಗೆ ಧೃತಿಗೆಡುವ ಅಗತ್ಯವಿಲ್ಲ. ರಾಜ್ಯ ರೈತಸಂಘ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಬೆನ್ನಿಗೆ ನಿಲ್ಲಲಿದೆ ಎಂದು ರೈತ ನಾಯಕ ಎಂ.ವಿ.ರಾಜೇಗೌಡ ತಿಳಿಸಿದರು.
ಹೇಮೆಯ ನೀರಿಗೆ ಜನಾಂದೋಲನ: ಹೇಮಾವತಿ ನೀರಿಗಾಗಿ ರೈತ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಅಗತ್ಯವಾದ ನೀರನ್ನು ಕಾಲುವೆಗಳ ಮುಖಾಂತರ ಹರಿಸುತ್ತಿಲ್ಲ. ರೈತ ಹೋರಾಟ ನಡೆಸಿದಾಗಲೆಲ್ಲಾ ಮೀಟಿಂಗ್ ಮಾಡಿ ಭರವಸೆ ನೀಡುತ್ತಿರುವ ಅಧಿಕಾರಿಗಳು ಇದುವೆರಗೂ ಕಾಲುವೆಗಳಿಗೆ ನೀರು ಹರಿಸದೆ ಕಾಲಹರಣ ಮಾಡುತ್ತಿದ್ದಾರೆ. ನೀರಿಗಾಗಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಛೇರಿಯ ಮುಂದೆ ತಾಲೂಕು ರೈತಸಂಘ ಚಳುವಳಿ ಮಾಡಿತ್ತು. ಇದರ ಫಲವಾಗಿ ಏಪ್ರಿಲ್ 02 ರಂದು ಮೀಟಿಂಗ್ ನಡೆಸಿದ ಪ್ರಾದೇಶಿಕ ಆಯುಕ್ತರು ಏಪ್ರಿಲ್ 15 ರ ಅನಂತರ ಮತ್ತೊಂದು ಸುತ್ತಿನ ಮೀಟಿಂಗ್ ನಡೆಸಿ ನೀರು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ತೀರ್ಮಾನ ಪ್ರಕಟಿಸಿದ್ದಾರೆ.

ಇದು ಮೀಟಿಂಗ್ ಹೆಸರಿನಲ್ಲಿ ಕಾಲಹರಣ ಮಾಡಿ ರೈತರನ್ನು ವಂಚಿಸುವ ಕೆಲಸ ಎಂದು ಅಧಿಕಾರಿಗಳ ನಡೆಯನ್ನು ಖಂಡಿಸಿರುವ ಎಂ.ವಿ.ರಾಜೇಗೌಡ ಅಧಿಕಾರಿಗಳು ರೈತ ವಿರೋಧಿಗಳಾಗಿದ್ದಾರೆ. ತಾಲೂಕಿನ ಮಂದಗೆರೆ, ಹೇಮಗಿರಿ ಮತ್ತು ಅಕ್ಕಿಹೆಬ್ಬಾಳು ಬಳಿ ಒಂದೂAದು ಖಾಸಗಿ ವಿದ್ಯುತ್ ಕಂಪನಿಗಳಿವೆ. ಇವು ಮಳೆಗಾಲದಲ್ಲಿ ಹರಿದು ಬರುವ ನದಿಯ ಹೆಚ್ಚುವರಿ ನೀರು ಬಳಕೆ ಮಾಡಿ ವಿದ್ಯುತ್ ಉತ್ಪಾಧಿಸಬೇಕು. ರೈತರಿಗೆ ಕಾಲುವೆಗಳ ಮೂಲಕ ನೀರು ಹರಿಸಲು ಮೀನ ಮೇಷ ಎಣಿಸುತ್ತಿರುವ ನೀರಾವರಿ ಎಂಜಿನಿಯರುಗಳು ಕಾಲುವೆ ಮೂಲಕ ಹರಿಯಬೇಕಾದ ರೈತರ ಪಾಲಿನ ನೀರನ್ನು ಖಾಸಗಿ ವಿದ್ಯುತ್ ಕಂಪನಿಗಳಿಗೆ ಬಿಡುತ್ತಿದ್ದಾರೆ. ನಾಲೆಗಳ ಹೂಳು ತೆಗೆಯದಿರುವ ಕಾರಣದಿಂದ ನಾಲೆಗಳ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಇದರ ಬಗ್ಗೆ ಒಂದು ದಿನವೂ ನೀರಾವರಿ ಇಲಾಖೆಯ ಎಂಜಿನಿಯರುಗಳಾಗಲೀ ಅಥವಾ ವಿವಿಧ ರಾಜಕೀಯ ಪಕ್ಷಗಳ ಜನ ಪ್ರತಿನಿಧಿಗಳಾಗಲೀ ಕನಿಷ್ಠ ಚಿಂತನೆ ಮಾಡುತ್ತಿಲ್ಲ.
ಹೇಮಾವತಿ ಜಲಾಶಯದಿಂದ ಬೇಸಿಗೆ ಅವಧಿಯಲ್ಲಿ ಒಂದು ಕಂತು ನೀರು ಹರಿಸಿದರೆ ಕೆ.ಆರ್.ಪೇಟೆ, ನಾಗಮಂಗಲ, ಮೇಲುಕೋಟೆ ಮತ್ತು ಮಂಡ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಹೇಮಾವತಿ ನೀರಿನ ವಿಚಾರದಲ್ಲಿ ಮೌನವಾಗಿರುವ ಜನ ಪ್ರತಿನಿಧಿಗಳನ್ನು ಎಚ್ಚರಿಸಲು ಏಪ್ರಿಲ್ 05 ರ ಶನಿವಾರ ರಾಜ್ಯ ರೈತಸಂಘದ ಕಾರ್ಯಕರ್ತರು ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮನೆ ಬಾಗಿಲಿಗೆ ಹೋಗಲಿದ್ದಾರೆ.
ಕಾಲುವೆಗಳ ಮುಖಂತರ ಹೇಮೆಯ ನೀರು ಹರಿಸದಿದ್ದರೆ ನಾಗಮಂಗಲ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎನ್.ಚಲುವರಾಯಸ್ವಾಮಿ ಅವರ ಮನೆಯ ಮುಂದೆ ಧರಣಿ ನಡೆಸಿ ಜನ ಪ್ರತಿನಿಧಿಗಳ ಮೌನ ನಡವಳಿಕೆಯ ವಿರುದ್ದ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿರುವ ಜನಪ್ರತಿನಿಧಿಗಳನ್ನು ಜಾಗೃತಗೊಳಿಸುವ ಕೆಲಸವನ್ನು ರೈತಸಂಘ ಮಾಡಲಿದೆ ಎಂದು ರೈತ ನಾಯಕ ಎಂ.ವಿ.ರಾಜೇಗೌಡ ತಿಳಿಸಿದ್ದಾರೆ.
- ಶ್ರೀನಿವಾಸ್ ಆರ್.