ಕೆ.ಆರ್.ಪೇಟೆ: ಫೆ.8ರಂದು ನಡೆದಿದ್ದ ತಾಲ್ಲೂಕು ಪ್ರಾಥಮಿಕ ಕೃಷಿ ಭೂ ಅಭಿವೃದ್ದಿ ಸಹಕಾರ ಬ್ಯಾಂಕ್(ಪಿ.ಎಲ್.ಡಿ ಬ್ಯಾಂಕ್) ನೂತನ ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶವು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸುಮಾರು ಒಂದೂವರೆ ತಿಂಗಳ ನಂತರ ಇಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 10ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಕೂಟವು ಕೇವಲ 4ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ 14ನೇ ವೃತ್ತದಿಂದ ಸ್ಪರ್ಧಿಸಿದ್ದ ಕೆ.ಟಿ.ಚಕ್ರಪಾಣಿ ಅವರು 477ಮತಗಳನ್ನು ಪಡೆದು ವಿಜಯದ ನಗೆ ಬೀರುವ ಮೂಲಕ, ತಮ್ಮ ಹತ್ತಿರದ ಪ್ರತಿಸ್ಪರ್ಧಿ ಎ.ಎನ್.ದೇವರಾಜು(404) ಅವರನ್ನು 73ಮತಗಳ ಅಂತರದಿಂದ ಸೋಲಿಸಿದ್ದಾರೆ.
ವಿಜೇತ ಅಭ್ಯರ್ಥಿಗಳ ವಿವರ: ಸಾಲಗಾರರರ 1ವೃತ್ತದಿಂದ ಅರೆಬೊಪ್ಪನಹಳ್ಳಿ ಸುನಿಲ್, 2ನೇ ವೃತ್ತದಿಂದ ಅಣ್ಣೇಚಾಕನಹಳ್ಳಿ ನಾಗರಾಜು, 3ನೇ ವೃತ್ತದಿಂದ ಬಂಡಿಹೊಳೆ ನಾಗೇಶ್, 4ನೇ ವೃತ್ತ ಬಿ.ಎಸ್.ಸುರೇಶ್, 5ನೇ ವೃತ್ತದಿಂದ ಸಿಮೆಂಟ್ ಮಂಜು ಅವಿರೋಧ ಆಯ್ಕೆ, 6ನೇ ವೃತ್ತದಿಂದ ಮಾಳಗೂರು ಜಗದೀಶ್ ಅವಿರೋಧ ಆಯ್ಕೆ, 7ನೇ ವೃತ್ತದಿಂದ ಶೀಳನೆರೆ ರಾಮೇಗೌಡ, 8ನೇ ವೃತ್ತದಿಂದ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, 9ನೇ ವೃತ್ತದಿಂದ ಮಂಜುಳಾ ಕೃಷ್ಣೇಗೌಡ, 10ನೇ ವೃತ್ತದಿಂದ ಬಣ್ಣೇನಹಳ್ಳಿ ಧನಂಜಯ, 11ನೇ ವೃತ್ತದಿಂದ ಅರಳಕುಪ್ಪೆ ಎ.ಸಿ.ಮೋಹನ್, 12ನೇ ವೃತ್ತದಿಂದ ಅಕ್ಕಿಹೆಬ್ಬಾಳು ರಾಜಾನಾಯಕ್, 13ನೇ ವೃತ್ತದಿಂದ ಕವಿತಚಂದ್ರೇಗೌಡ, 14ನೇ ವೃತ್ತದಿಂದ ಕೆ.ಟಿ.ಚಕ್ರಪಾಣಿ ಅವರುಗಳು ಗೆಲುವು ಸಾಧಿಸಿದ್ದಾರೆ.

ಈ ಪೈಕಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ 1ನೇ ವೃತ್ತದ ಸುನಿಲ್, 4ನೇ ವೃತ್ತದ ಬಿ.ಎಸ್.ಸುರೇಶ್, 10ನೇ ವೃತ್ತದ ಬಿ.ಜಿ.ಧನಂಜಯ, 2ನೇ ವೃತ್ತ ಅಣ್ಣೇಚಾಕನಹಳ್ಳಿ ನಾಗರಾಜು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತಾ.ಪಂ.ಇಓ ಕೆ.ಸುಷ್ಮ ಮತ್ತು ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್, ಬ್ಯಾಂಕಿನ ಕಾರ್ಯದರ್ಶಿ ರವಿಕುಮಾರ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತರಾದ 4ನೇ ವೃತ್ತದಿಂದ ಸಿಮೆಂಟ್ ಮಂಜು, 5ನೇ ವೃತ್ತದಿಂದ ಮಾಳಗೂರು ಜಗದೀಶ್ ಅವಿರೋಧ ಆಯ್ಕೆಗೊಂಡಿದ್ದರು.

ಕಾಂಗ್ರೆಸ್ ಬೆಂಬಲಿತ ನೂತನ ನಿರ್ದೇಶಕರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಮುಖಂಡರಾದ ವಿಜಯರಾಮೇಗೌಡ, ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭಾ ಸದಸ್ಯ ಕೆ.ಬಿ.ಮಹೇಶ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಕುಮಾರ್, ಬಲ್ಲೇನಹಳ್ಳಿ ರಮೇಶ್, ದೊಡ್ಡಗಾಡಿಗನಹಳ್ಳಿ ಕುಮಾರ್, ತಾಲ್ಲೂಕು ಕೆಡಿಪಿ ಸದಸ್ಯ ಬೀರುವಳ್ಳಿ ಆಕಾಶ್, ಎನ್.ಜಿ.ಹೇಮಂತ್‌ಕುಮಾರ್, ಮಹೇಶ್, ಎನ್.ಜೆ.ವೆಂಕಟೇಶ್, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.

ಕೂದಲೆಳೆಯ ಅಂತರದ ಜಯ: 2ನೇ ವೃತ್ತದಿಂದ ಸ್ಪರ್ಧಿಸಿದ್ದ ಅಣ್ಣೇಚಾಕನಹಳ್ಳಿ ನಾಗರಾಜು ಅವರು 90ಮತಗಳನ್ನು ಪಡೆದುಕೊಳ್ಳುವ ಮೂಲಕ ಪ್ರತಿಸ್ಪರ್ಧಿ ಸಿ.ಜೆ.ಮಂಜೇಗೌಡ (88ಮತ) ಅವರ ವಿರುದ್ದ ಕೇವಲ 2ಮತಗಳ ಅಂತರದಿAದ ಗೆದ್ದು ವಿಜಯದ ನಗೆ ಬೀರಿದ್ದಾರೆ.
ಮಾಜಿ ಸೈನಿಕನ ಕೈಹಿಡಿಯದ ಮತದಾರ: ತಾಲ್ಲೂಕಿನ 4ವೃತ್ತದಿಂದ ಸ್ಪರ್ಧೆ ಮಾಡಿದ್ದ ನಿವೃತ್ತ ಸೈನಿಕ ಜಯರಾಂ ಅವರು 51 ಮತ ಗಳಿಸಿ ಪರಾಭವಗೊಂಡಿದ್ದಾರೆ. ಪ್ರತಿಸ್ಪರ್ಧಿ ಬಿ.ಎಸ್.ಸುರೇಶ್ 57ಮತಗಳನ್ನು ಪಡೆದುಕೊಂಡು ವಿಜಯ ಸಾಧಿಸಿದ್ದಾರೆ. ಸದರಿ ಕ್ಷೇತ್ರದ ಜಯರಾಂ ಅವರು ಸುಮಾರು 20ವರ್ಷಗಳ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಪಿ.ಎಲ್.ಡಿ.ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತದಾರರು ಇವರನ್ನು ಸೋಲಿಸುವ ಮೂಲಕ ಜನಸೇವೆ ಮಾಡಬೇಕೆಂಬ ಮಾಜಿ ಸೈನಿಕನ ಆಸೆಗೆ ನಿರಾಸೆ ಮೂಡಿಸಿದ್ದಾರೆ.
- ಶ್ರೀನಿವಾಸ್ ಆರ್.