
ಕೆ.ಆರ್.ಪೇಟೆ-ಮನುಷ್ಯನಿಗೆ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ಬಹು ಮುಖ್ಯವಾಗಿದೆ.ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು.ತಮ್ಮ ಆರೋಗ್ಯಕ್ಕಾಗಿ ಗುಣಮಟ್ಟದ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರಗತಿ ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಅನುದಾನ ರಹಿತ ಪ್ರೌಢಶಾಲೆಯ ಆವರಣದಲ್ಲಿ ಇದೇ ತಿಂಗಳು 17ರಂದು ಪ್ರಗತಿ ಆಹಾರ ಮೇಳ(ನ್ಯೂಟ್ರಿಷನ್ ಬಜಾರ್ ಎಕ್ಸ್ಪೋ) ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಲಾ ಹಂತದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಬಗ್ಗೆ ಜಾಗೃತಿ ಮೂಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವಿವಿಧ ತರಕಾರಿ ಹಣ್ಣು ಅವುಗಳ ಮಹತ್ವವನ್ನು ತಿಳಿದುಕೊಂಡು ತಮ್ಮ ಪೋಷಕರಿಗೂ ತಿಳಿಸಲು ಸಹಕಾರಿಯಾಗುತ್ತದೆ.ಭಾರತ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪ್ರತಿ ಸೆಪ್ಟೆಂಬರ್ ತಿಂಗಳಲ್ಲಿ ಒಂದು ತಿಂಗಳು ಪೂರ್ಣ ಪೋಷಣ್ ಅಭಿಯಾನ, ನಂತರ ಮಾರ್ಚ್ ತಿಂಗಳಲ್ಲಿ ಪೋಷಣ್ ಪಕ್ವಾಡ್, ಅನಂತರ ಪ್ರತಿ ವಾರವೂ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಸುತ್ತಾ ಪೌಷ್ಠಿಕ ಆಹಾರ ಸೇವನೆಯ ಮಹತ್ವವನ್ನು ಪೋಷಕರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಕಿಶೋರಿಯರಿಗೆ ತಿಳಿಸಿಕೊಡಲಾಗುತ್ತದೆ.ಇದೇ ಪೋಷಣ್ ಅಭಿಯಾನ ಮಾದರಿಯಲ್ಲಿ ಪ್ರಗತಿ ಶಾಲೆಯ ಸಿಇಓ ಕೂಡ ಆಗಿರುವ ಆಹಾರ ತಜ್ಞೆ ಡಾ.ಎಂ.ಕೆ.ಮೋನಿಕಾ ಅವರು ಆಹಾರ ಮೇಳ(ನ್ಯೂಟ್ರಿಷನ್ ಬಜಾರ್ ಎಕ್ಸ್ಪೋ) ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ ಜೊತೆಗೆ ನ್ಯೂಟ್ರಿಷನ್ ಬಜಾರ್ ಎಕ್ಸ್ಪೋ ಕಾರ್ಯ ಕ್ರಮವನ್ನು ಹಮ್ಮಿಕೊಂಡಿರುವುದು ಹೆಚ್ಚು ಶ್ಲಾಘನೀಯವಾದುದು. ಇದು ಪ್ರಾಯಶಃ ಇದು ಮಂಡ್ಯ ಜಿಲ್ಲೆಯಲ್ಲೇ ಪ್ರಪ್ರಥಮ ಕಾರ್ಯಕ್ರಮವಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ರೋಗಗಳು ಹಾಗೂ ಅದಕ್ಕೆ ಪರಿಹಾರ ವಾಗಿರುವ ಆಹಾರಗಳು ಹಣ್ಣು ತರಕಾರಿ, ಯಾವ ವಿಟಮಿನ್ ಕೊರತೆಯಿಂದ ಯಾವ ಪೌಷ್ಟಿಕಾಂಶ ಆಹಾರವನ್ನು ತಿಂದರೆ ನಮ್ಮ ದೇಹಕ್ಕೆ ಉಪಯುಕ್ತ ಎಂಬ ವಿಷಯವನ್ನು ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಸಹಕಾರಿಯಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ವಿಷಯದ ಬಗ್ಗೆ ಪ್ರಾಜೆಕ್ಟ್ ಸಿದ್ಧಪಡಿಸಿ ವಿವರಣೆಯನ್ನು ನೀಡುವುದರ ಜೊತೆಗೆ ಆ ವಿದ್ಯಾರ್ಥಿಯು ಅದರ ವಿಷಯದ ಸಂಬoಧಿಸಿದ ಹಣ್ಣು ಸೊಪ್ಪು ದವಸ-ಧಾನ್ಯ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಈ ಆಹಾರ ಮೇಳದ ವಿಶೇಷವಾಗಿದೆ. ಇದೇ ರೀತಿಯ ಆಹಾರ ಮೇಳ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿಯೂ ನಡೆಯಬೇಕು ಎಂದು ಡಾ.ಸೀತಾಲಕ್ಷ್ಮಿ ಆಶಯ ವ್ಯಕ್ತ ಪಡಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಯ ಸಿಇಓ ಹಾಗೂ ಆಹಾರ ತಜ್ಞೆ ಡಾ.ಎಂ.ಕೆ.ಮೋನಿಕಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನಟರಾಜ್,ಪುರಸಭೆಯ ಆರೋಗ್ಯ ನಿರೀಕ್ಷಕ ಅಶೋಕ್,ಆರೋಗ್ಯ ಇಲಾಖೆಯ ಅಧಿಕಾರಿ ಗಳಾದ ಸತೀಶ್,ಧರ್ಮೇಂದ್ರ,ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ,ಪ್ರಗತಿ ಶಾಲೆಯ ಅಧ್ಯಕ್ಷೆ ಟಿ.ಶೈಲಜಾ,ಮುಖ್ಯ ಶಿಕ್ಷಕ ಎಚ್.ಆರ್.ಗೋಪಾಲಕೃಷ್ಣ,ಕರಾಟೆ ಶಿಕ್ಷಕ ಹೇಮಂತ್,ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ನೂರಾರು ಪೋಷಕರು ಉಪಸ್ಥಿತರಿದ್ದರು.
—————–ಶ್ರೀನಿವಾಸ್ ಆರ್