ಕೆ.ಆರ್.ಪೇಟೆ,ಮೇ.20: ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಬೆಳಿಗ್ಗೆ ಸಂಜೆ ಎಂ.ಎಂ.ಎಸ್. ಪೋಟೋ ತೆಗೆಯುವ ವ್ಯವಸ್ಥೆಯನ್ನು ರದ್ದು ಪಡಿಸಬೇಕು. ವರ್ಷಕ್ಕೆ 200ಮಾನವ ದಿನ ಕೂಲಿ ಕೆಲಸ ನೀಡಬೇಕು ದಿನಕ್ಕೆ ಕನಿಷ್ಠ 600ರೂ ಕೂಲಿ ನಿಗಧಿ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಉಪಾಧ್ಯಕ್ಷರಾದ ಎನ್.ಸುರೇಂದ್ರ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಶಾಂತಮ್ಮ, ಕೆಂಪಮ್ಮ, ರತ್ನಮ್ಮ ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಪಂಚಾಯತ್ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ತಾಲ್ಲೂಕು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಜಾಬ್ ಕಾರ್ಡ್ ಮಾಡಿಕೊಡುತ್ತಿಲ್ಲ. ಇಲ್ಲ ಸಲ್ಲದ ಸಬೂಬು ನೀಡಿ ತೊಂದರೆ ನೀಡುತ್ತಿದ್ದಾರೆ. ಜಾಬ್ ಇರುವ ಎಲ್ಲರಿಗೂ ನರೇಗಾ ಕೂಲಿ ಕೆಲಸ ನೀಡುತ್ತಿಲ್ಲ ಎಂದು ದೂರಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡಿ, ಈಗ ನೀಡುತ್ತಿರುವ ವರ್ಷಕ್ಕೆ 100ದಿನ ಕೂಲಿ ನೀಡಲಾಗುತ್ತಿದೆ. ಇದು ಏನೇನು ಸಾಲುತ್ತಿಲ್ಲ. ಹಾಗಾಗಿ ವರ್ಷಕ್ಕೆ 200 ಮಾನವ ದಿನ ಕೂಲಿ ಕೆಲಸ ನೀಡಬೇಕು. ದಿನಕ್ಕೆ 600 ರೂಪಾಯಿ ಕೂಲಿ ನಿಗಧಿ ಮಾಡಬೇಕು. ನಮೂನೆ 06 ರಲ್ಲಿ ಕೆಲಸ ಕೇಳಿರುವ ಎಲ್ಲ ಕೂಲಿಕಾರರಿಗೂ ಕೆಲಸ ನೀಡಬೇಕು. ನರೇಗಾ ಕೆಲಸ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು.

ಉದ್ಯೋಗ ಖಾತ್ರಿ ಸ್ಥಳದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಫೋಟೋ ತೆಗೆಯುವುದನ್ನು ಕೈಬಿಡಬೇಕು. ಈಗಾಗಲೇ ತಾಲೂಕಿನಂತೆ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು. ತಾಲೂಕಿನ ಅತ್ಯಂತ ಕುಡಿಯುವ ನೀರು ರಸ್ತೆ ಚರಂಡಿ ವಿದ್ಯುತ್ ದೀಪ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಗುಣಮಟ್ಟದ ಊಟ ಶೌಚಾಲಯ ನೀಡಬೇಕು. ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಸುಸಜ್ಜಿತ ಸ್ಮಶಾನ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಕೆ.ಸುಷ್ಮಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಇ.ಒ.ಸುಷ್ಮಾ, ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳನ್ನು ಇತ್ಯರ್ತ ಪಡಿಸುತ್ತೇನೆಂದು ಎಂದು ಭರವಸೆ ನೀಡಿದರು. ಸ್ಥಳದಲ್ಲಿಯೇ ಹಲವು ಪಿಡಿಓ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ ಜಾಬ್ ಕಾರ್ಡ್, ನರೇಗಾ ಕೂಲಿ ಕೆಲಸ ನೀಡುವುದಕ್ಕೆ ಆದೇಶ ನೀಡಿದರು. ಬಳಿಕ ಪ್ರತಿಭಟನಾಕಾರರು ತಮ್ಮ ಚಳುವಳಿಯನ್ನು ವಾಪಸ್ ಪಡೆದರು.

ಪ್ರತಿಭಟನೆ ನೇತೃತ್ವವನ್ನು ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಜಿಲ್ಲಾ ಉಪಾಧ್ಯಕ್ಷ ಎನ್.ಸುರೇಂದ್ರ , ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷರಾದ ಗಿರೀಶ್, ಕಾರ್ಯದರ್ಶಿ ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಶಾಂತಮ್ಮ, ಕೆಂಪಮ್ಮ, ರತ್ನಮ್ಮ ಮುಂತಾದವರು ಹಾಜರಿದ್ದರು.
- ಶ್ರೀನಿವಾಸ್ ಆರ್.