ಕೆ.ಆರ್.ಪೇಟೆ-ಪಿಯುಸಿ ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ತರಗತಿ-ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ-ಚೆಲುವ ಯ್ಯ ಸೂಚನೆ

ಕೆ.ಆರ್.ಪೇಟೆ-ತಾಲೂಕಿನಲ್ಲಿ ದ್ವಿತೀಯ ಪಿಯು ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ತರಗತಿ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನಹರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಚೆಲುವಯ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸಲಹೆ ನೀಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಕೆ.ಮೋಹನ್ ನೇತೃತ್ವದಲ್ಲಿ ನಡೆದ ಕೆ.ಆರ್.ಪೇಟೆ ತಾಲ್ಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರವೇಶಾತಿಗೆ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ಪತ್ರಾಂಕಿತ ವ್ಯವಸ್ಥಾಪಕರು ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಇದೆ ರೀತಿಯಲ್ಲಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಪ್ರತಿ ಪ್ರೌಢಶಾಲೆಗೆ ಭೆಟಿ ನೀಡಿ ಮಕ್ಕಳ ಹಾಜರಾ ತಿಯನ್ನು ಹೆಚ್ಚಿಸಿಕೊಳ್ಳಿ. ಮಕ್ಕಳ ಪ್ರವೇಶಾತಿ ಕಡಿಮೆಗೆ ಕಾರಣ ಕಳಪೆ ಫಲಿತಾಂಶ. ಆದ್ದರಿಂದ ಕಳೆದ ಬಾರಿಗಿಂತ ಹೆಚ್ಚು ಫಲಿತಾಂಶವನ್ನು ತರುವಂತೆ ಇಲಾಖೆ ಗುರಿ ನೀಡಿದೆ. ಅದಕ್ಕಾಗಿ ಪ್ರತಿ ತಾಲೂಕಿನ ಕಾಲೇಜಿಗೂ ಭೇಟಿ ನೀಡಿ ನಿಗಾವಹಿಸಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಈ ಬಾರಿ ಹೆಚ್ಚಳ ಫಲಿತಾಂಶ ಬರಬೇಕೆಂಬುದು ನಮ್ಮೆಲ್ಲರ ಗುರಿಯಾಗಬೇಕು. ಪ್ರತಿಯೊಂದು ಕಾಲೇಜು ಉತ್ತಮ ಫಲಿತಾಂಶ ಬಂದರೆ ಮಾತ್ರ ಪ್ರವೇಶಾತಿ ಸುಧಾರಣೆ ಸಾಧ್ಯ ಎಂದರು.

ಪರಿಕ್ಷೆಗಳು ಮಾರ್ಚಿ 1ರಿಂದ ಆರಂಭವಾಗುವದರಿoದ ಈಗಿನಿಂದಲೆ ವಿಶೇಷ ತರಗತಿಗಳನ್ನು ನಡೆಸಬೇಕು. ಈ ಬಾರಿ ಪರಿಕ್ಷೆಗಳು ವೆಬ್–ಸಿಸಿ ಟಿವಿ ಅಡಿಯಲ್ಲಿ ನಡೆಯಲಿದೆ. ಪ್ರಾಯೋಗಿಕ ಪರಿಕ್ಷೆಗೂ ಇದನ್ನು ಜಾರಿಗೊಳಿಸಲಾಗುವುದು ಎಂದು ಉಪ ನಿರ್ದೇಶಕ ಚೆಲುವಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ, ಪಿಯುಸಿ ಶಿಕ್ಷಣದ ನಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪದವಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ ಬಹುತೇಕ ಮಕ್ಕಳು ಪದವಿ ಶಿಕ್ಷಣದಿಂದ ವಂಚಿತರಾಗುತಿದ್ದಾರೆ. ಇದನ್ನು ಸರಿದೂಗಿಸಲು ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಪದವಿ ಪಡೆದುಕೊಳ್ಳಲು ಮನವರಿಕೆ ಮಾಡಬೇಕು. ಪಟ್ಟಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿವೆ. ಪಿಯುಸಿ ನಂತರ ಎಂಜಿನಿಯರ್ ಮತ್ತು ಮೆಡಿಕಲ್ ಒಂದೇ ಗುರಿ ಎಂಬ ಮಕ್ಕಳ ಧೋರಣೆ ಬದಲು ಮಾಡಲು ಪಿಯುಸಿ ಹಂತದಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ನಮ್ಮ ಕಾಲೇಜಿನಲ್ಲಿ ಅತ್ಯುತ್ತಮವಾದ ಗ್ರಂಥಾಲಯವಿದೆ. ಪ್ರತಿನಿತ್ಯ ಕೆರಿಯರ್ ಗೈಡೆನ್ಸ್ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಉದ್ಯೋಗಸ್ಥರಾಗಬೇಕು ಎಂಬುದೆ ನಮ್ಮ ಕಾಲೇಜಿನ ಧ್ಯೇಯ. ಇದಕ್ಕಾಗಿ ಎಲ್ಲಾ ಪ್ರಾಂಶುಪಾಲರುಗಳು ಸಹಕರಿಸಬೇಕು. ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೆ.ಆರ್.ಪೇಟೆ ಸರ್ಕಾರಿ ಪದವಿ ಕಾಲೇಜನ್ನು ಆಯ್ಕೆಮಾಡಿ ಕೊಳ್ಳಲು ತಿಳಿಸಬೇಕು ಎಂದು ಡಾ.ಜಗದೀಶ್ ಮನವಿ ಮಾಡಿದರು.

ಪಿಯುಸಿ ನೋಡಲ್ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ,ಸರಕಾರಿ ಪಿಯುಸಿ ಕಾಲೇಜಿನ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಉಪನ್ಯಾಸಕರ ಕೊರತೆಯಿಂದ ದಾಖಲಾತಿ ಕಡಿಮೆಯಾಗುತ್ತಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಸಮಸ್ಯೆಗಳ ಬಗೆಗೆ ಕ್ರಮವಹಿಸುವಂತೆ ಮನವಿ ಮಾಡಿದರು.

ಪಟ್ಟಣದ ಬಾಲಕಿಯರ ಪಿಯುಸಿ ಕಾಲೇಜು, ಜೂನಿಯರ್ ಕಾಲೇಜು, ಕಿಕ್ಕೇರಿ, ಬೂಕನಕೆರೆ, ಸಂತೆಬಾಚಹಳ್ಳಿ, ಶೀಳನೆರೆ, ಅಕ್ಕಿಹೆಬ್ಬಾಳು, ಸಿಂಧುಘಟ್ಟ, ಆನೆಗೊಳ, ತೆಂಡೇಕೆರೆ, ಹರಿಹರಪುರ, ಅಕ್ಕಿಹೆಬ್ಬಾಳು, ವಿಠಲಾಪುರ, ಬಲ್ಲೇನಹಳ್ಳಿ, ಸೋಮನಹಳ್ಳಿ ಪಿಯುಸಿ ಕಾಲೇಜುಗಳ ಮತ್ತು ಅನುದಾನಿತ ಕೃಷ್ಣರಾಜ ಪಿಯುಸಿ ಕಾಲೇಜು,ಸ್ಕಾಲರ್ ಪಿಯುಸಿ ಕಾಲೇಜು, ಕದಂಬ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರುಗಳು ಭಾಗವಹಿಸಿ ತಮ್ಮ ಕಾಲೇಜುಗಳ ಬಗೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಭಾಗವಹಿಸಿದ್ದರು.

————-ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?