ಕೆ.ಆರ್.ಪೇಟೆ-ಪುರಸಭಾ ಮಳಿಗೆಗಳ ಹರಾಜಿಲ್ಲ-ಶಾದಿಮಹಲ್ ಗೆ ಬೇಡಿಕೆ ಇಟ್ಟ ಖಮ್ಮರ್ ಬೇಗಂ-ಹೇಮಾವತಿ ಬಡಾವಣೆಯ ನಿವಾಸಿಗಳಿಗೆ’ಖಾತೆ-ಖ್ಯಾತೆ’-ಪ್ರತಿಭಟಿಸುವ ಎಚ್ಚರಿಕೆ ನೀಡಿದ ಡಿ.ಪ್ರೇಮಕುಮಾರ್

ಕೆ.ಆರ್.ಪೇಟೆ-ಕೆ.ಆರ್.ಪೇಟೆ ಪುರಸಭೆಯ ಅಧ್ಯಕ್ಷೆ ಪಂಕಜಾಪ್ರಕಾಶ್ ನೇತೃತ್ವದಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಯಿತು.

ಸಭೆಯು ಆರಂಭವಾಗುತ್ತಿದ್ದoತೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರನ್ನು ಪುರಸಭೆ ಮುಖ್ಯಾಧಿಕಾರಿ ನಟರಾಜ್ ಸ್ವಾಗತಿಸಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಮಾಡಲೇ ಬೇಕಾಗಿದೆ, ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಮನವಿಗೆ ಪೂರಕವಾಗಿ ಚರ್ಚೆ ನಡೆಸಿದ ಸದಸ್ಯರಾದ ಬಸ್‌ಸಂತೋಷ್ ಕುಮಾರ್, ಡಿ. ಪ್ರೇಮಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ಮಹಾದೇವಿ ನಂಜುoಡ, ನಿಯಮಾವಳಿಯ ಪ್ರಕಾರ ಅಂಗಡಿ ಮಳಿಗೆಗಳು ಹರಾಜಾದರೂ ಪ್ರಸ್ತುತ ಬಾಡಿಗೆಗೆ ಪಡೆದಿರುವ ವರ್ತಕರಿಗೆ ಹರಾಜು ಬಿಡ್’ನ ಶೇ.5ರಷ್ಟು ಹೆಚ್ಚು ಬಾಡಿಗೆ ಕಟ್ಟಿಸಿಕೊಂಡು ಅವರನ್ನೆ ಮುಂದುವರೆಸಲು ಅವಕಾಶ ಇರುವುದರಿಂದ ಲೋಕೋಪಯೋಗಿ ಇಲಾಖೆ ನಿಯಮಾವಳಿಗೆ ಒಳಪಟ್ಟು ಹಾಲಿ ಬಾಡಿಗೆದಾರರನ್ನೇ ಮುಂದುವರೆಸೋಣ ಎಂದು ರೂಲಿಂಗ್ ನೀಡಿದ ಅಧ್ಯಕ್ಷೆ ಪಂಕಜಾಪ್ರಕಾಶ್ ಅವರ ನಿರ್ಧಾರವನ್ನು ಸ್ವಾಗತಿಸಿದರು.

ಹೊಸದಾಗಿ 100 ಎಲ್.ಇ.ಡಿ ದೀಪಗಳನ್ನು ಖರೀದಿಸಿ ಅವಶ್ಯಕತೆ ಇರುವ ಕಡೆಗೆ ಬೀದಿ ದೀಪಗಳನ್ನು ಹೊಸದಾಗಿ ಕಟ್ಟಿಸುವುದು, ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿರುವ ಕೆಲಸಗಳನ್ನು ತುರ್ತಾಗಿ ಆರಂಭಿಸುವುದು ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಕಾಮಗಾರಿ ನಡೆಸಲು ನಿರ್ಧರಿಸಲಾಯಿತು.

ಪ್ರತಿಭಟನೆ ಎಚ್ಚರಿಕೆ:

ಹಿರಿಯ ಕೌನ್ಸಿಲರ್ ಡಿ.ಪ್ರೇಮಕುಮಾರ್ ಮಾತನಾಡಿ, ಹೇಮಾವತಿ ಬಡಾವಣೆಯ ನಿವೇಶನಗಳು ಹಾಗೂ ಮನೆಗಳ ಖಾತೆಗಳನ್ನು ಮಾಡಿ ಈ ಸ್ವತ್ತು ನೀಡಬೇಕೆಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದ್ದರೂ ನೌಕರರ ಬೇಜವಾಬ್ದಾರಿಯಿಂದಾಗಿ ಈ ಸ್ವತ್ತು ಮಾಡಿಕೊಡುವ ಕೆಲಸ ಸಂಪೂರ್ಣವಾಗಿ ಕುಂಟಿತಗೊoಡಿದೆ.ಈ ಬಗ್ಗೆ ಅಧ್ಯಕ್ಷರು ತುರ್ತು ಗಮನ ನೀಡಿ ಶ್ರೀಸಾಮಾನ್ಯರ ನಿವೇಶನಗಳು ಹಾಗೂ ಮನೆಗಳ ಈ ಸ್ವತ್ತು ಮಾಡಿಸಿಕೊಡುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು. ಇಲ್ಲದಿದ್ದರೆ ವಾರ್ಡಿನ ಸದಸ್ಯನಾಗಿ ನಾನೇ ಖುದ್ದಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕಿನ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರಿಗಾಗಿ ಇದ್ದ ಖಾಸಿಂಖಾನ್ ಸಮುದಾಯ ಭವನವನ್ನು ಪುರಸಭಾ ಕಚೇರಿಯನ್ನಾಗಿ ಮಾರ್ಪಡಿಸಲಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ವಿವಾಹ ಕಾರ್ಯಕ್ರಮ ಸೇರಿದಂತೆ ವಿವಿಧ ಶುಭ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಶೀಘ್ರವೇ ಒಂದು ಸುಸಜ್ಜಿತವಾದ ಶಾಧಿ ಮಹಲ್ ಭವನವನ್ನು ನಿರ್ಮಿಸಿಕೊಟ್ಟು ಅನುಕೂಲ ಮಾಡಿ ಕೊಡಬೇಕೆಂದು ಸಭೆಯಲ್ಲಿ ಹಾಜರಿದ್ದ ಸದಸ್ಯೆ ಖಮ್ಮರ್ ಬೇಗಂ ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಮತ್ತು ಕೆ.ಬಿ.ಮಹೇಶ್‌ಕುಮಾರ್, ತಿಮ್ಮೇಗೌಡ, ಸಂತೋಷ್‌ಕುಮಾರ್, ಎಚ್.ಆರ್.ಲೋಕೇಶ್, ಮಹಾದೇವಿ ನಂಜುoಡ, ಶುಭಗಿರೀಶ್, ಗಾಯಿತ್ರಿ ಸುಬ್ಬಣ್ಣ, ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ವಿಶೇಷ ಸಭೆಗೆ ಬಿಜೆಪಿ ಸದಸ್ಯ ನಟರಾಜ್, ಜೆಡಿಎಸ್ ಸದಸ್ಯರಾದ ಗಿರೀಶ್, ಹೆಚ್.ಡಿ.ಅಶೋಕ್, ಕೆ.ಎಸ್.ಪ್ರಮೋದ್, ಶೋಭಾದಿನೇಶ್, ಪದ್ಮಾರಾಜು, ಕಾಂಗ್ರೆಸ್ ಸದಸ್ಯರಾದ ಕೆ.ಸಿ.ಮಂಜುನಾಥ್, ಸುಗುಣ ರಮೇಶ್, ಹೆಚ್.ಎನ್.ಪ್ರವೀಣ್ ಗೈರು ಹಾಜರಾಗಿದ್ದರು.

——-——ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?