ಕೆ.ಆರ್.ಪೇಟೆ-ಭೂಮಿತಾಯಿ, ಗೋಮಾತೆ ಹಾಗೂ ತಂದೆ ತಾಯಿಗಳನ್ನು ಗೌರವಿಸಿ, ಪ್ರಕೃತಿ ಮಾತೆಯನ್ನು ಆರಾಧಿಸಿ-ಮಾತಾ ಸುಮಿತ್ರಾ ದೇಸಾಯಿ ಕರೆ

ಕೆ.ಆರ್.ಪೇಟೆ: ಭೂಮಿತಾಯಿ, ಗೋಮಾತೆ ಹಾಗೂ ತಂದೆ ತಾಯಿಗಳನ್ನು ಗೌರವಿಸಿ, ಪ್ರಕೃತಿ ಮಾತೆಯನ್ನು ಆರಾಧಿಸಿ, ಮೌಡ್ಯಗಳು ಹಾಗೂ ಸಾಮಾಜಿಕ ಕಟ್ಟುಪಾಡುಗಳ ನಿರ್ಮೂಲನೆಗೆ ಧೀಕ್ಷೆ ತೊಡಲು ಮಹಾರಾಷ್ಟ್ರ ರಾಜ್ಯದ ಪೂನಾ ನಗರದ ಸುಮಿತ್ರಾದೇಸಾಯಿ ಕರೆ ನೀಡಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನಹಳ್ಳಿ ಗ್ರಾಮದಲ್ಲಿ ಶ್ರೀಲಕ್ಷ್ಮೀ ರಂಗನಾಥ ಮತ್ತು ಕಾರೆ ತಾಳಮ್ಮ ತಾಯಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಹೆಣ್ಣುಮಕ್ಕಳು ನಮ್ಮ ರಾಷ್ಟ್ರದ ಶಕ್ತಿಯಾಗಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳ ಒತ್ತಡಗಳ ನಡುವೆಯೇ ಪ್ರಾತಃಕಾಲ ಮುಂಜಾನೆ 3ಗಂಟೆಗೆ ಎದ್ದು ಯೋಗ, ಧ್ಯಾನ, ಸತ್ಸಂಗದಂತಹ ಆಧ್ಯಾತ್ಮಿಕ ಕೆಲಸ ಕಾರ್ಯಗಳೊಂದಿಗೆ ನಮ್ಮ ದೈನಂದಿನ ಕೆಲಸಗಳನ್ನು ಆರಂಭಿಸಿದರೆ ಮಾನಸಿಕ ಒತ್ತಡಗಳಿಂದ ಮುಕ್ತವಾಗಿ ಶಾಂತಿ ನೆಮ್ಮದಿಯಿಂದ ಇಡೀ ದಿನ ಲವಲವಿಕೆ ಹಾಗೂ ಕ್ರಿಯಾಶೀಲತೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ನಮ್ಮ ಜೀವನದಲ್ಲಿ ಎದುರಾಗುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಹೆಜ್ಜೆ ಹಾಕಬೇಕು. ಕಷ್ಟಗಳು ಬಂದಾಗ ಹೆದರದೇ, ಸುಖ ಸಂತೋಷಗಳು ಒಟ್ಟೊಟ್ಟಿಗೆ ಬಂದಾಗ ಹಿಗ್ಗದೇ ಜೀವನ ನಡೆಸುವುದನ್ನು ಕಲಿಯಬೇಕು.

ಕಷ್ಟದಲ್ಲಿರುವ ಬಡ ಜನರ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗಬೇಕು ಎಂದು ಕಿವಿಮಾತು ಹೇಳಿದ ಮಾತಾಜಿ ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಭಾರತದ ನಾಗರೀಕರಾದ್ದರಿಂದ ನಾವು ನಮ್ಮ ಮಕ್ಕಳಿಗಾಗಿ ಹಣ ಆಸ್ತಿಯನ್ನು ಕೂಡಿಡುವ ಬದಲಿಗೆ ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರವನ್ನು ಕೊಡಿಸಿ ನಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಂವಿಧಾನದ ಆಶಯದಂತೆ ಸಾಮಾಜದಲ್ಲಿ ವಾಸಿಸುವ ಎಲ್ಲರಲ್ಲಿಯೂ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು. ನಾವು ವಾಸಮಾಡುವ ಭೂಮಿ, ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಸೇರಿದಂತೆ ಎಲ್ಲಾ ವಸ್ತುಗಳು ಮಲಿನವಾಗಿ ನಮ್ಮ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುತ್ತಿರುವುದರಿಂದ ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ ಪೋಷಿಸಿ ಬೆಳೆಸಲು ಸಂಕಲ್ಪ ಮಾಡಬೇಕು. ಜೀವ ಸಂಕುಲಗಳು ಸೇರಿದಂತೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದೇ ಪರಿಸರ ಸಂರಕ್ಷಣೆ ಮಾಡುತ್ತೇವೆ ಎಂದು ಧೀಕ್ಷೆ ತೊಡಬೇಕು ಎಂದು ಮಾತಾಜಿ ಸುಮಿತ್ರಾದೇಸಾಯಿ ಕರೆ ನೀಡಿದರು.


ಸತ್ಸಂಗ ಕಾರ್ಯಕ್ರಮದಲ್ಲಿ ಜೈನಹಳ್ಳಿ ಗೌಡಪ್ಪ, ಬಸವನ ಹಳ್ಳಿ ಮಧುಸೂದನ್,. ಮುಕುಂದ, ಕುಪ್ಪಳ್ಳಿ ಸಂಪತ್ ಕುಮಾರ್, ತುಳಸಿರಾಮು, ಜೆ. ಡಿ.ಶಿವೇಗೌಡ, ಚಂದ್ರು, ಮಹದೇವ, ಮನುಪೂಜಾರಿ, ಗಂಗೆ ಪೂಜಾರಿ, ಗಣೇಶ್, ಜೀವು, ಸ್ವಾಮಿ, ಮಹದೇವ್, ಅರ್ಜುರು ಅಶೋಕ, ಸೇರಿದಂತೆ ಸ್ತ್ರಿಶಕ್ತಿ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?