ಕೆ.ಆರ್.ಪೇಟೆ,-ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೋಖೋ,ವಾಲಿಬಾಲ್,ಕುಂಟೆಬಿಲ್ಲೆ, ಮರಕೋತಿ ಆಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ನಶಿಸಿಹೋಗುತ್ತಿದ್ದು,ಅವುಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಸಮಾಜ ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಅವರು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಫ್ರೆಂಡ್ಸ್ ವಾಲಿಬಾಲ್ ಕ್ರೀಡಾ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಬಹುತೇಕ ಯುವ ಜನತೆ ಟಿ.ವಿ, ಮೊಬೈಲ್, ಫೇಸ್‌ಬುಕ್, ವಾಟ್ಸಪ್ ಗೀಳಿನಿಂದಾಗಿ ಸೋಮಾರಿತನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇಂತಹ ಗೀಳಿನಿಂದ ಯುವಕರು ಆದಷ್ಟು ದೂರವಿರಬೇಕು. ಎಷ್ಟು ಬೇಕೋ ಅಷ್ಟು ಮಾತ್ರ ಮೊಬೈಲ್ ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಸೋಲು ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕಾರಬೇಕು. ಇಂದಿನ ಸೋಲು ಮುಂದಿನ ಗೆಲುವಿಗೆ ಸೋಪಾನವಾಗುತ್ತದೆ ಎಂದರು.
ನಿರಂತರ ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಹೆಚ್ಚುತ್ತದೆ. ಆರೋಗ್ಯವಂತೆ ಸದೃಢ ದೇಹವಿದ್ದರೆ, ಆರೋಗ್ಯವಂತ ಸದೃಢ ಮನಸ್ಸು ರೂಪುಗೊಳ್ಳತ್ತದೆ ಎಂಬ ವಿವೇಕಾನಂದರ ವಾಣಿಯಂತೆ ಯುವಕರು ಯಾವಾಗಲೂ ಚೈತನ್ಯ ಶೀಲರಾಗಿರ ಬೇಕಾದರೆ ದುಶ್ಚಟಗಳನ್ನು ದೂರ ಮಾಡಿ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾದ ಕಿಕ್ಕೇರಿ ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಯುವಕರಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡುವ ಅತ್ಯುತ್ತಮ ಆಟಗಾರರಿದ್ದಾರೆ. ಆದರೆ ಸೂಕ್ತ ವೇದಿಕೆ ಇಲ್ಲದೆ ಅವಕಾಶ ವಂಚಿತರಾಗಿ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯವಾದುದು.ಇದೇ ರೀತಿ ಖೋಖೋ, ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು ಎಂದು ಆಯೋಜಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ನಿವೃತ್ತ ಪ್ರಾಂಶುಪಾಲ ಜಾಣೇಗೌಡ, ಸಮಾಜ ಸೇವಕ ಮೊಟ್ಟೆ ಮಂಜು, ಕಾಯಿ ಸುರೇಶ್, ಲಕ್ಷ್ಮೀಪುರ ಗ್ರಾ.ಪಂ ಮಾಜಿ ಅಧ್ಯಕ್ಷ ತುಳಸಿ ರಮೇಶ್, ಕಿಕ್ಕೇರಿ ಧರ್ಮ, ಕಾಂಗ್ರೆಸ್ ಯುವ ಮುಖಂಡ ಉಜೇಫ್, ವಕೀಲ ಚಂದ್ರು, ಯುವ ಮುಖಂಡರಾದ ಮಂಜು,ಅನಿಲ್,ಸುನಿಲ್ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿಭಾವಂತ ಕ್ರೀಡಾಪಟುಗಳು ಹಾಜರಿದ್ದರು.
————-ಶ್ರೀನಿವಾಸ್ ಕೆ.ಆರ್ ಪೇಟೆ