ಕೆ.ಆರ್.ಪೇಟೆ-ಮನುಷ್ಯನಿಗೆ ಸಮಯವು ಅತೀ ಅಮೂಲ್ಯವಾದುದಾಗಿದೆ.ಕಳೆದ ಹೋದ ಸಮಯವನ್ನು ನಾವು ವಾಪಸ್ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಹಾಗಾಗಿ ಈಗ ನಮ್ಮ ಮುಂದಿರುವ ಸಮಯವನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಲೇಖಕರಾದ ಕೆ.ಕಾಳೇಗೌಡ ಅವರು ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ವತಿಯಿಂದ ಹೊರ ತರಲಾಗಿರುವ 2025ನೇ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ದಿನದರ್ಶಿಕೆಯು ಮನುಷ್ಯನಿಗೆ ಸಮಯದ ಮಹತ್ವ, ದಿನದ ಮಹತ್ವವನ್ನು ತಿಳಿಸಿ ಕೊಡುತ್ತದೆ. ಜನರು ಯಾವ ದಿನ ಏನು ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ದಿನದರ್ಶಿಕೆಯನ್ನು ಬಳಸುತ್ತಾರೆ. ನಮ್ಮ ದೇಶದಲ್ಲಿ ಯಾವ ಭಾಗದಲ್ಲಿ ಜಾತ್ರೆಗಳು, ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತಾರೆ. ಮಹನೀಯರ ಜನ್ಮ ದಿನ ಯಾವ ದಿನಾಂಕ ಇರುತ್ತದೆ. ಯಾವ ಧರ್ಮದ ಮುಖ್ಯ ಹಬ್ಬಗಳನ್ನು ಯಾವ ದಿನ ಆಚರಿಸುತ್ತಾರೆ. ಪ್ರಮುಖವಾಗಿ ಸಂಕ್ರಾoತಿ, ಯುಗಾದಿ ಹಬ್ಬ, ಗೌರಿ-ಗಣೇಶ ಹಬ್ಬ, ದಸರಾ-ದೀಪಾವಳಿ, ಮಹಾಲಯ ಅಮಾವಾಸ್ಯೆ ಹಬ್ಬ, ಕ್ರಿಶ್ಚಿಯನ್ನರ ಕ್ರಿಸ್‌ಮಸ್,ಮುಸ್ಲಿಮರ ರಮದಾನ್, ಬಕ್ರೀದ್, ಮೊಹರಂ, ಸೇರಿದಂತೆ ಹಲವು ಹಬ್ಬಗಳ ಮಾಹಿತಿಯನ್ನು ನೀಡಲಾಗುತ್ತದೆ. ಇದು ಆಯಾ ಸಮುದಾಯದ ಜನತೆ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗಾಂಧೀ ಜಯಂತಿ, ಅಂಬೇಡ್ಕರ್ ಜಯಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಕಾರ್ಮಿಕರ ದಿನಾಚರಣೆ ಸೇರಿದಂತೆ ಹಲವು ಹಬ್ಬ ಹರಿ-ದಿನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಿನದರ್ಶಿಕೆಯು ಒಳಗೊಂಡಿರುತ್ತದೆ. ಇಂದು ದಿನದರ್ಶಿಕೆ ಇಲ್ಲದ ಮನೆಯನ್ನು ನಾವು ಕಾಣುವುದಿಲ್ಲ. ಪ್ರತಿಯೊಬ್ಬರ ಮನೆಯಲ್ಲಿಯೂ ದಿನದರ್ಶಿಕೆ(ಕ್ಯಾಲೆಂಡರ್) ಇದ್ದೇ ಇರುತ್ತದೆ. ಇಂತಹ ಸಂಪೂರ್ಣ ಮಾಹಿತಿ ಕಣಜ ಇರುವಂತಹ ಕ್ಯಾಲೆಂಡರ್ ಅನ್ನು ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನ ಜನತೆಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವ ತಾಲ್ಲೂಕು ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್ ಅವರ ಅಭಿಮಾನಿ ಬಳಗದ ಸೇವೆ ಅತ್ಯಂತ ಶ್ಲಾಘನೀಯವಾದುದು ಎಂದರು.
ಇದಕ್ಕೆ ಬೆಂಬಲವಾಗಿ ನಿಂತಿರುವ ಆರ್.ಟಿ.ಓ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಅವರು ತಾಲ್ಲೂಕಿನ ಜನತೆಗೆ ತಮ್ಮ ಕೈಲಾದ ಸೇವೆಯನ್ನು ಉದಾರವಾಗಿ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಸೇವೆಯು ತಾಲ್ಲೂಕಿನ ಜನರ ಮನೆ ಮನೆ ಮುಟ್ಟುವಲ್ಲಿ ಯಶಸ್ವಿಯಾಗಿದೆ. ತಾಲ್ಲೂಕಿನಲ್ಲಿ ನಡೆಯುವ ನಾಟಕಗಳು, ಕ್ರೀಡಾ ಕೂಟಗಳು, ಶಾಲಾ ಶೈಕ್ಷಣಿಕ ಸಮಾರಂಭಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುವ ಮೂಲಕ ಎಲ್ಲರ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ಜನರು ಕಷ್ಟ ಎಂದು ಬಂದಾಗ ತಮ್ಮ ಕೈಲಾದ ಸಹಾಯವನ್ನು ಮಾಡಿ, ಬಡಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ ಇವರಿಗೆ ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿಯನ್ನು ದಯ ಪಾಲಿಸಲಿ ಎಂದು ಕೆ.ಕಾಳೇಗೌಡ ಶುಭು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಆರ್.ಟಿ.ಓ. ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್. ಮಾಜಿ ಕಾರ್ಯಾಧ್ಯಕ್ಷರಾದ ಬಳ್ಳೇಕೆರೆ ಮಂಜುನಾಥ್, ಸಾಹಿತಿಗಳು ಹಾಗೂ ಪ್ರಾಂಶುಪಾಲರಾದ ಬಲ್ಲೇನಹಳ್ಳಿ ಮಂಜುನಾಥ್, ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ತಿಲಕ್‌ರಾಜ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಶಿಕ್ಷಕರಾದ ಬಸವರಾಜು, ಮೊಸಳೇಕೊಪ್ಪಲು ದಿನೇಶ್, ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯ ಜಿ.ಎ.ರಾಯಪ್ಪ, ಎ.ರಾಜು, ಅಣೆಚೌಡೇನಹಳ್ಳಿ ರವಿ, ಪ್ರಶಾಂತ್, ಮಡುವಿನಕೋಡಿ ಉಮೇಶ್, ತಾಲ್ಲೂಕು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ರಾಗಿಮುದ್ದನಹಳ್ಳಿ ದೇವರಾಜು, ತಾಲ್ಲೂಕು ಆರ್.ಟಿ.ಓ.ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಸಂಚಾಲಕ ವಿಜಯಣ್ಣ, ಸೋಮು, ಪ್ರದೀಪ್, ಸೇರಿದಂತೆ ಹಲವು ಗಣ್ಯರು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
—————-ಶ್ರೀನಿವಾಸ್ ಆರ್