ಕೆ.ಆರ್.ಪೇಟೆ:ಮಾಜಿ ಮುಖ್ಯ ಮಂತ್ರಿ ಎಸ್.ಎಂ ಕೃಷ್ಣ ರವರು ಕರ್ನಾಟಕದ ವಜ್ರ ಕಿರೀಟ ಇದ್ದಂತೆ ಅವರ ಅಗಲಿಕೆ ನಾಡಿನ ಜನರಿಗೆ ನುಂಗಲಾರದ ತುತ್ತಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹೇಳಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (92) ಅವರ ನಿಧನದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸಾಪ ಹಾಗೂ ಎಸ್.ಎಂ ಕೃಷ್ಣ ಅಭಿಮಾನಿಗಳಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿದರು.
ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಎಸ್. ಎಂ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಅವರ ಮುಖ್ಯಮಂತ್ರಿ ಆಡಳಿತ ಅವಧಿಯಲ್ಲಿ ಕೈಗೊಂಡ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಜನತೆ ಸದಾ ಚಿರಋಣಿಯಾಗಿರಬೇಕು.ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿ ಅವರ ದೂರದರ್ಶಿತ್ವ,ಶಿಸ್ತುಬದ್ಧ ಜೀವನ,ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ರಾಜ್ಯದ ಜನತೆಯು ಕೂಡ ಭಾಗಿಯಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಪೀಠಾಧ್ಯಕ್ಷರಾದ ರುದ್ರಮುನಿ ಸ್ವಾಮೀಜಿ ಅವರು, ಎಸ್.ಎಂ.ಕೃಷ್ಣ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಮುಖ್ಯಮಂತ್ರಿಯಾಗಿ,ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ,ರಾಜ್ಯಸಭಾ ಸದಸ್ಯರಾಗಿ, ವಿಧಾನಸಭಾ,ವಿಧಾನ ಪರಿಷತ್,ಲೋಕಸಭಾ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.ಕೃಷ್ಣ ಅವರಿಗೆ ಯಾರ ಮೇಲೂ ದ್ವೇಷ ಇರಲಿಲ್ಲ ಮತ್ತು ಅವರು ನಿರ್ವಹಿಸಿದ ಇಲಾಖೆಯಲ್ಲಿ ಯಾವಾಗಲೂ ಘನತೆಯನ್ನು ತರುತ್ತಿದ್ದರು. ಅವರ ಜೀವನ ಯುವ ರಾಜಕಾರಣಿಗಳಿಗೆ ಒಂದು ಸಂದೇಶವಾಗಿದೆ. ನಮಗೆ ಉತ್ತಮ ರಾಜಕಾರಣಿಗಳು ಸಿಗಬಹುದು, ಆದರೆ ಅವರಂತಹ ಅತ್ಯುತ್ತಮ ರಾಜಕಾರಣಿ ಸಿಗುವುದು ಕಷ್ಟ ಬಣ್ಣಿಸಿದರು.
ಈ ಸಂದರ್ಭದಲ್ಲಿ ಸಾರಂಗಿ ನಾಗಣ್ಣ ಕಟ್ಟೆ ಮಹೇಶ್, ಕಸಾಪ ಮಂಜೇಗೌಡ, ಧರ್ಮರಾಜು, ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕತ್ತರಘಟ್ಟ ವಾಸು, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್ ನೀಲಕಂಠ, ಅಗ್ರಹಾರ ಬಾಚಹಳ್ಳಿ ನಾಗೇಶ್,ಗ್ರಾ.ಪಂ ಮಾಜಿ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ್, ಪುರ ಮಹೇಶ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
———————-ಶ್ರೀನಿವಾಸ್ ಕೆ.ಆರ್ ಪೇಟೆ