
ಕೆ.ಆರ್.ಪೇಟೆ-ಮಕರ ಸಂಕ್ರಾತಿ ಹಬ್ಬದ ದಿನವಾದ ಮಂಗಳವಾರ ತಾಲ್ಲೂಕಿನಾದ್ಯಂತ ಮಹಿಳೆಯರು, ಮಕ್ಕಳು ಪರಸ್ಪರ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾoತಿಯನ್ನು ಆಚರಿಸಿ ಸಂತಸ ಪಟ್ಟರು.ಇನ್ನು ಯುವಕರು ಹಾಗೂ ಪುರುಷರು ತಮ್ಮ ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮದಿoದ ಸಂಕ್ರಾoತಿ ಹಬ್ಬವನ್ನು ಆಚರಿಸಿದರು.
ಸಂಕ್ರಾoತಿ ಹಬ್ಬದ ಅಂಗವಾಗಿ ಮುಂಜಾನೆಯೇ ಪಟ್ಟಣದ ಶ್ರೀ ಮುತ್ತುರಾಯಸ್ವಾಮಿ ದೇವಾಲಯ, ಶ್ರೀ ಕಲ್ಲುಮಠದ ಶ್ರೀ ಚನ್ನಬಸವೇಶ್ವರ ದೇವಾಲಯ, ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯ, ಆಂಜನೇಯಸ್ವಾಮಿ ದೇವಾಲಯ, ಮುಕ್ಕಟ್ಟೆ ಚೌಕದಲ್ಲಿನ ಶ್ರೀ ಮೂಡಲ ಆಂಜನೇಯಸ್ವಾಮಿ ದೇವಾಲಯ, ಪುರ ಗ್ರಾಮದ ಶ್ರೀ ಮಲೆ ಮಹದೇಶ್ವರ ದೇವಾಲಯ, ಅಗ್ರಹಾರಬಾಚಹಳ್ಳಿಯ ಶ್ರೀ ಲಕ್ಷ್ಮಿ ದೇವಿ ದೇವಾಲಯ, ಶ್ರೀ ಚನ್ನಕೇಶವ ದೇವಾಲಯ, ಚಿಲ್ಲದಗಳ್ಳಿಯ ಶ್ರೀ ಮಾಯಮ್ಮ-ಲಕ್ಷ್ಮಿ ದೇವಿ ದೇವಾಲಯ ಸೇರಿದಂತೆ ತಾಲ್ಲೂಕಿನ ಎಲ್ಲಾ ದೇವಾಲಯಗಳಲ್ಲೂ ದೇವರಿಗೆ ವಿಶೇಷ ಪೂಜೆ, ವಿವಿಧ ಬಗೆಯ ಅಭಿಷೇಕ, ಪುಷ್ಪಾಲಂಕಾರವನ್ನು ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಬೆಳಿಗ್ಗೆ ಮಹಿಳೆಯರು, ಮಕ್ಕಳು ಹೊಸಬಟ್ಟೆ ತೊಟ್ಟು ದೇವಾಲಯಗಳಿಗೆ ತೆರಳಿ ಪ್ರಥಮ ದರ್ಶನ ಪಡೆದು ಧನ್ಯತಾಭಾವ ಮೆರೆದರು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿoದ ನಾನಾ ಪೂಜೆಗಳು ನಡೆಯುತ್ತಿದ್ದು, ಧನುರ್ಮಾಸದ ಕೊನೆಯ ದಿನವಾದ ಸಂಕ್ರಾoತಿ ಹಬ್ಬದಂದು ವಿಶೇಷ ಪೂಜೆ ವಿಜೃಂಭಣೆಯಿoದ ನಡೆದವು. ದೇವಾಲಯಗಳಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಮನೆಯಲ್ಲಿ ರುಚಿಯಾದ ಅಡುಗೆ ತಯಾರಿಸಿ ಸವಿದು ಸಂತೋಷದಿoದ ಹಬ್ಬ ಆಚರಿಸಿದರು. ಸಂಜೆಯಾದ ಬಳಿಕ ಮಹಿಳೆಯರು-ಮಕ್ಕಳು ಎಳ್ಳು- ಬೆಲ್ಲದೊಂದಿಗೆ ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಎಳ್ಳು ಬೆಲ್ಲ, ಕಬ್ಬು ನೀಡುವ ಮೂಲಕ ಪರಸ್ಪರ ಸಂಕ್ರಾoತಿ ಹಬ್ಬದ ಶುಭಾಶಯ ವಿನಿಮಯ ಮಾಡಿ ಕೊಂಡರು. ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ಸಮರ್ಪಿಸಿದರು.

ಸಂಕ್ರಾoತಿಯ ಅಂಗವಾಗಿ ಬೆಳಗ್ಗೆಯಿಂದಲೇ ಜಾನುವಾರುಗಳ ಮೈ ತೊಳೆದು ರಾಸುಗಳ ಮೈಗೆ ಬಣ್ಣ ಹಚ್ಚಿ, ಪುಷ್ಪಗಳಿಂದ ಕೂಡಿದ ಹಾರಗಳನ್ನು ಹಾಕಿ ಸಿಂಗರಿಸಿ ಮುಸ್ಸಂಜೆಯ ವೇಳೆಗೆ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಪಟ್ಟಣದ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಮುತ್ತುರಾಜ್, ಶ್ರೀನಿವಾಸ್ ಮುತ್ತು ಅವರು ಕಿಚ್ಚು ಹಾಯಿಸುವ ಗೋವುಗಳಿಗೆ ಪೂಜೆ ಸಲ್ಲಿಸಿದರು. ನಂತರ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಗ್ರಹಾರ ಬಡಾವಣೆಯ ಯುವ ರೈತರು ಹಾಗೂ ಹಿರಿಯ ರೈತರ ಮಾರ್ಗದರ್ಶನದಲ್ಲಿ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಿಂದ ಅಗ್ರಹಾರ ಬಡಾವಣೆಯ ವೃತ್ತದವರೆಗೆ ಅಲ್ಲಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಮೂಲಕ ಸಂಕ್ರಾoತಿ ಹಬ್ಬದ ರಂಗನ್ನು ಹೆಚ್ಚಿಸಿದರು.
——————–-ಶ್ರೀನಿವಾಸ್ ಆರ್