ಕೆ.ಆರ್.ಪೇಟೆ – ಪಿ.ಎಲ್.ಡಿ ಬ್ಯಾಂಕ್ ಗ್ರಾಮೀಣ ಭಾಗದ ರೈತ ಪಾಲಿನ ಸಂಜೀವಿನಿ ಇದ್ದಂತೆ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ನೂತನ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡರನ್ನ ಸನ್ಮಾನಿಸುವ ಮೂಲಕ ಅಭಿನಂದಿಸಿ ಮಾತನಾಡಿದರು.

ಪಿ.ಎಲ್.ಡಿ ಬ್ಯಾಂಕ್ ಗ್ರಾಮೀಣ ಭಾಗದ ಜನರ ಸಂಜೀವಿನಿ ಇದ್ದಂತೆ ಇಂತಹ ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡಲು ಸುವರ್ಣ ಅವಕಾಶ ನಿಮಗೆ ಸಿಕ್ಕಿದೆ, ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಿ, ಪಕ್ಷಬೇಧ ಮರೆತು ಉತ್ತಮ ಆಡಳಿತ ಮಾಡುವುದರ ಜೊತೆಗೆ ನಿಮ್ಮ ಆಡಳಿತ ಅವಧಿಯಲ್ಲಿ ಬ್ಯಾಂಕ್ ನ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ನನ್ನನು ಎರಡನೇ ಬಾರಿಗೆ ಅಧ್ಯಕ್ಷರಾಗಲು ಸಹಕರಿಸಿದ ನನ್ನೆಲ್ಲ ನಿರ್ದೇಶಕರಿಗೆ ಋಣಿಯಾಗಿ, ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ.ರೈತರಿಗೆ, ನಿರುದ್ಯೋಗಿಗಳಿಗೆ ಉಪಕಸುಬು ಕೈಗೊಳ್ಳಲು ಕುರಿ, ಕೋಳಿ, ಮೇಕೆ, ಫಾರಂ ಆರಂಭಿಸಲು ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಬಣ್ಣೇನಹಳ್ಳಿ ಧನಂಜಯ್,ಶೀಳನೆರೆ ರಾಮೇಗೌಡ,ಬಂಡಿಹೊಳೆ ನಾಗೇಶ್, ಸೇರಿದಂತೆ ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.