ಕೆ.ಆರ್.ಪೇಟೆ-ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗ್ರಹಾರ ಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 36ನೇ ವರ್ಷದ ಶಾಲೆಗೊಂದು ಕನ್ನಡ ಜಾಗೃತಿ ಕಾರ್ಯಕ್ರಮ

ಕೆ.ಆರ್.ಪೇಟೆ-ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 36ನೇ ವರ್ಷದ ಶಾಲೆಗೊಂದು ಕನ್ನಡ ಜಾಗೃತಿ ಕಾರ್ಯಕ್ರಮ ನಡೆಯಿತು.

ಶಿಕ್ಷಣ ಸಂಯೋಜಕರಾದ ವೇಣುಗೋಪಾಲ್ ಅವರು ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ,ಕನ್ನಡಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು 1956ರಲ್ಲಿ ರಚಿಸಲಾಯಿತು. ಆದರೆ 1973ರ ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ನೇತೃತ್ವದಲ್ಲಿ ಮರುನಾಮಕರಣ ಮಾಡಲಾಯಿತು. ನಾವು ಪ್ರತಿ ವರ್ಷ ನವೆಂಬರ್ ಒಂದರoದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಮದ್ರಾಸ್ ಪ್ರಾಂತ್ಯ, ಹೈದ್ರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸಲು ಆಲೂರು ವೆಂಕಟರಾಯರು, ಕೇಸರಿ ಗಂಗಾಧರರಾವ್ ದೇಶಪಾಂಡೆ, ಪಾಟೀಲ್ ಪುಟ್ಟಪ್ಪ, ಅಂದಾನಪ್ಪ ದೊಡ್ಡಮೇಟಿ, ಕೆ.ಸಿ.ರೆಡ್ಡಿ, ಹರ್ಡೀಕರ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಸಾಹಿತಿಗಳಾದ ಕುವೆಂಪು, ಹುಯಿಲಗೋಳ ನಾರಾಯಣರಾವ್, ಅನಕೃ, ಡಿ.ಎಸ್.ಕರ್ಕಿ, ಬಿ.ಎಂ.ಶ್ರೀ, ಸಂಘಟನೆಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳು, ಗಣ್ಯರು, ಮಹನೀಯರು ತನು, ಮನ, ಧನ ಅರ್ಪಿಸಿ ತ್ಯಾಗ ಬಲಿದಾನ ಮಾಡಿ ಕರ್ನಾಟಕ ಏಕೀಕರಣಕ್ಕೆ ಕಾರಣ ಕರ್ತರಾಗಿದ್ದಾರೆ ಎಂದರು.

ಇಂತಹ ಮಹನೀಯರನ್ನು ಸ್ಮರಿಸಲು ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 36ವರ್ಷಗಳ ಹಿಂದೆಯೇ ತಾಲ್ಲೂಕಿನ ಪ್ರತಿ ಪ್ರೌಢಶಾಲೆಯಲ್ಲಿ ನವೆಂಬರ್ ತಿಂಗಳಿಡೀ ಶಾಲೆಗೊಂದು ಕಾರ್ಯಕ್ರಮ ಆರಂಭಿಸಿ ಕನ್ನಡ ಭಾಷೆಯ ಬಗ್ಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸಿ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ.ಸತತ 36ವರ್ಷಗಳು ಕಳೆದರೂ ಮುಂದುವರೆಸಿಕೊoಡು ಬರುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ನಿವೃತ್ತ ಉಪ ಪ್ರಾಂಶುಪಾಲರಾದ ಡಿ.ರಾಜೇಗೌಡ ಅವರು ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ,ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶವು ಹರಡಿತ್ತು. ಆದರೆ ಕನ್ನಡಿಗರ ಉದಾರ ಗುಣದಿಂದ ಈಗ ಕೇವಲ ಬೀದರ್‌ನಿಂದ ಚಾಮರಾಜನಗರವರೆಗೆ ಮಾತ್ರ ಕರ್ನಾಟಕ ಸೀಮಿತವಾಗಿದೆ. ಇದೇ ರೀತಿ ಪರಭಾಷಿಕರ ಬಗ್ಗೆ ಮೆದು ಧೋರಣೆ ಮುಂದುವರೆದರೆ ಕನ್ನಡ ನಾಡು ನಶಿಸಿ ಹೋಗುವ ಅಪಾಯ ಎದುರಾಗಲಿದೆ. ಹಾಗಾಗಿ ಕನ್ನಡವನ್ನು ಉಳಿಸುವುದು ಮತ್ತು ಅಭಿವೃದ್ದಿ ಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇತರೆ ಭಾಷಿಕರು ಕರ್ನಾಟಕ ರಾಜ್ಯಕ್ಕೆ ಬಂದರೆ ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸ ಮಾಡಬೇಕು. ಅವರ ಭಾಷೆಯನ್ನು ಕನ್ನಡಿಗರೇ ಕಲಿತು ಅವರೊಂದಿಗೆ ವ್ಯವಹರಿಸುವ ಮೆದು ಬುದ್ದಿಯನ್ನು ಬಿಡಬೇಕು ಎಂದು ಡಿ.ರಾಜೇಗೌಡರು ಸಲಹೆ ನೀಡಿದರು.

ಶಾಲೆಯ ಹಿರಿಯ ಆಂಗ್ಲ ಭಾಷಾ ಶಿಕ್ಷಕ ಕೆ.ಎಸ್.ರಾಜು ಅವರು ಸುಮಾರು 5ಸಾವಿರ ರೂ ಬೆಲೆ ಬಾಳುವ ಎಸ್.ಎಸ್.ಎಎಲ್.ಸಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಕೆ ಸಹಾಯಕವಾಗುವಂತೆ ಕಲಿಕಾ ಅಭ್ಯಾಸ ಪುಸ್ತಕಗಳನ್ನು ವಿತರಣೆ ಮಾಡಿದರು.

ಮುಖ್ಯ ಶಿಕ್ಷಕರಾದ ಡಿ.ಎಸ್.ಪುಟ್ಟರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಶಿಕ್ಷಕ ಎಂ.ಎಸ್.ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ಶಿಕ್ಷಕರಾದ ಕೆ.ಎಸ್.ರಾಜು, ಎಂ.ಎಸ್.ಸುರೇಶ್, ಎಸ್.ಕೆ.ಪ್ರಸನ್ನಕುಮಾರ್, ವಿ.ಎಂ.ರೂಪಾ, ವೀಣಾ, ಎಸ್.ಡಿ.ಎಂ.ಸಿ ಸದಸ್ಯ ಎ.ವಿ.ಕೃಷ್ಣ, ಬೋಧಕೇತರ ಸಿಬ್ಬಂದಿಗಳಾದ ವಿಶಾಲಾಕ್ಷಮ್ಮ, ಪ್ರವೀಣ್‌ಕುಮಾರ್, ಸಾರಂಗಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ಯಾರಹಳ್ಳಿ ಗೋವಿಂದರಾಜು ಹಾಗೂ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

—————-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?