ಕೆ.ಆರ್.ಪೇಟೆ,ಮೇ.02: ಈ ಭಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ 60.88ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿದ್ದ 2544ವಿದ್ಯಾರ್ಥಿಗಳ 1549 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿರುತ್ತಾರೆ. ಈ ಪೈಕಿ ಪಟ್ಟಣದ ಎಸ್.ಎಸ್.ಕೆ.ಸಿ ಪ್ರೌಢಶಾಲೆಯ ಧೃತಿ.ಜೆ ಎಂಬ ವಿದ್ಯಾರ್ಥಿನಿ 625ಕ್ಕೆ 625ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಾಲ್ಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 625ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಧೃತಿ.ಜೆ, 623ಅಂಕಗಳನ್ನು ಪಡೆದ ಮೋದೂರಿನ ಎಂ.ಎಸ್. ಗೀತಾಂಜಲಿ, 620ಅಂಕಗಳನ್ನು ಪಡೆದ ಆರ್.ಎಸ್. ಸ್ವಪ್ನ ಅವರನ್ನು ಇಲಾಖೆಯ ಪರವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಟಾಪ್ ಟೆನ್ ವಿದ್ಯಾರ್ಥಿಗಳು: ಎಸ್.ಎಸ್.ಕೆ.ಸಿ ಶಾಲೆಯ ಧೃತಿ.ಜೆ-625, ಎಂ.ಎಸ್.ಗೀತಾಂಜಲಿ- 623, ಸ್ವಪ್ನ.ಆರ್.ಎಸ್-620, ಆದಿಚುಂಚನಗಿರಿ ಪ್ರೌಢಶಾಲೆಯ ಬಿ.ಧನುಷ್ ಗೌಡ-619, ಡಿ.ಆರ್.ಕೃಪ-619, ಆರ್ಯನ್ ಸತೀಶ್ ನಾಯಕ್-618, ಕೇಂಬ್ರಿಡ್ಜ್ ಹೆಚ್.ಡಿ.ಮೌಲ್ಯ-612, ಚೈತನ್ಯ ಶಾಲೆಯ ಗೀತಾ.ಎಸ್- 612,ತೇಗನಹಳ್ಳಿ ಆಶೀರ್ವಾದ ಶಾಲೆಯ ಅಮೂಲ್ಯ.ಬಿ.ಎನ್-611, ಆದಿಚುಂಚನಗಿರಿ ಶಾಲೆಯ ಸ್ಪೂರ್ತಿ. ಆರ್- 609, ಕೇಂಬ್ರಿಡ್ಜ್ ಶಾಲೆ ಹಂಸವೇಣಿ- 609 ಅಂಕಗಳನ್ನು ಪಡೆದ ಟಾಪ್ ವಿದ್ಯಾರ್ಥಿಗಳಾಗಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, 625ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಧೃತಿ.ಜೆ.ಪೋಷಕರಾದ ಜ್ಞಾನೇಶ್-ರಶ್ಮಿ, 623ಅಂಕಗಳನ್ನು ಪಡೆದ ಗೀತಾಂಜಲಿ ಪೋಷಕರಾದ ಮೋದೂರು ಶ್ರೀನಿವಾಸ್-ರಾಧಾ, 620ಅಂಕಗಳನ್ನು ಪಡೆದ ಸ್ವಪ್ನ ಪೋಷಕರಾದ ರಮೇಶ್-ಸರ್ವಮಂಗಳ ಹಾಗೂ ಶಿಕ್ಷಣ ಸಂಯೋಜಕರಾದ ಹರೀಶ್, ಕೃಷ್ಣನಾಯಕ್, ನವೀನ್ಕುಮಾರ್, ಮೋಹನ್ಕುಮಾರ್, ವೀರಭದ್ರಯ್ಯ, ಎಸ್.ಎಸ್.ಕೆ.ಸಿ.ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಗ್ರಾಮ ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ದಾಖಲೆ ಸರಿಗಟ್ಟಿದ ಧೃತಿ: ಇದೇ ಕಳೆದ ಎರಡು ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪತ್ರಕರ್ತರಾದ ಆರ್.ಶ್ರೀನಿವಾಸ್ ಅವರ ಸುಪುತ್ರಿ ಆಶೀರ್ವಾದ ಶಾಲೆಯ ವಿದ್ಯಾರ್ಥಿನಿ ಬಿ.ಎಸ್.ಮೊನಾಲಿಸಾ 624 ಅಂಕಗಳನ್ನು ಪಡೆದಿದ್ದರು. ಕಳೆದ ಸಾಲಿನಲ್ಲಿ ಇದೇ ಧೃತಿ ಸಹೋದರಿ ಮೋಕ್ಷಾ 624 ಅಂಕಗಳನ್ನು ಪಡೆದಿದ್ದು ಇದೂವರೆಗಿನ ಬಹುದೊಡ್ಡ ದಾಖಲೆ ಫಲಿತಾಂಶವಾಗಿತ್ತು. ಈ ಭಾರಿ ಧೃತಿ.ಜೆ. 625ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಹಿಂದಿನ ಎಲ್ಲಾ ಸಾಲಿನ ದಾಖಲೆಗಳನ್ನು ಮುರಿದು ಬಹುದೊಡ್ಡ ಸಾಧನೆ ಮಾಡಿದ್ದಾಳೆ ಎಂದು ಹಿಂದಿನ ಎರಡು ವರ್ಷಗಳ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಾಧನೆಯನ್ನು ಉಲ್ಲೇಖಿಸಿ ಹಳೆಯ ವಿದ್ಯಾರ್ಥಿಗಳ 624ಅಂಕಗಳ ಸಾಧನೆಯೇ ಈ ಭಾರಿಯ ಧೃತಿಯ 625ಅಂಕಗಳ ಸಾಧನೆಗೆ ಪ್ರೇರಕ ಶಕ್ತಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಜಿನಿಯರ್ ಆಗುವಾಸೆ : 625ಅಂಕಗಳನ್ನು ಪಡೆರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೆ.ಆರ್.ಪೇಟೆ ತಾಲ್ಲೂಕಿನ ಕೀರ್ತಿಯನ್ನು ಬೆಳಗಿರುವ ಧ್ರುತಿ ಮಾತನಾಡಿ ನಾನು ಈ ಸಾಧನೆ ಮಾಡಲು ನನಗೆ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹ ಸಹಕಾರಿಯಾಗಿತ್ತು. ಜೊತೆಗೆ ರಾತ್ರಿ 1ಗಂಟೆಯವರೆವಿಗೂ ಓದುತ್ತಾ ಪುನರ್ ಮಾಡಿಕೊಂಡು ಪರೀಕ್ಷೆ ಎದುರಿಸಿದ್ದು 625ಕ್ಕೆ 625ಅಂಕಗಳನ್ನು ಪಡೆದುಕೊಳ್ಳಲು ಸಹಕಾರಿಯಾಯಿತು. ಮುಂದೆ ಪಿಯುಸಿ ವಿಜ್ಞಾನ ವಿಭಾಗ ಮುಗಿಸಿ, ಅನಂತರ ಇಂಜಿನಿಯರ್ ಆಗಬೇಕೆಂಬ ಆಸೆಯನ್ನು ಇಟ್ಟುಕೊಂಡಿರುವುದಾಗಿ ಧೃತಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶವಾಗಿರುವ ಕೆ.ಆರ್.ಪೇಟೆ ತಾಲ್ಲೂಕಿನ ವಿದ್ಯಾರ್ಥಿನಿ ಧೃತಿ 625ಅಂಕಗಳನ್ನು ಪಡೆದು ತಾಲ್ಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿರುವುದು ನಮಗೆ ಹೆಚ್ಚಿನ ಸಂತೋಷವಾಗಿದೆ ಎಂದರು.
- ಶ್ರೀನಿವಾಸ್ ಆರ್.