ಕೆ.ಆರ್.ಪೇಟೆ: ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ತಾಲೂಕಿನ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ದ ಮಾರ್ಚ್ 20 ರ ಗುರುವಾರದಿಂದ ಅನಿರ್ದಿಷ್ಟವಾದಿ ಚಳುವಳಿ ಆರಂಭಿಸುತ್ತಿರುವುದಾಗಿ ತಾಲೂಕು ರೈತಸಂಘದ ಪ್ರಕಟಿಸಿದೆ.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತ ಮುಖಂಡರು ನೀರಿಗಾಗಿ ಚಳುವಳಿಯ ಬಗ್ಗೆ ಪ್ರಕಟಿಸಿದರು.
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಎಂ.ವಿ.ರಾಜೇಗೌಡ ತಾಲೂಕಿನಲ್ಲಿ ಬಿರು ಬೇಸಿಗೆಯಿದ್ದು ಕೆರೆಕಟ್ಟೆಗಳು ಬರಿದಾಗಿವೆ. ತಾಲೂಕು ಆಡಳಿತದ ವರದಿಯಂತೆ ತಾಲೂಕಿನ 96 ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ. ಜನ ಜಾನುವಾರುಗಳ ಕುಡಿಉಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹೇಮೆಯ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ತಾಲೂಕು ರೈತಸಂಘ ಈಗಾಗಲೇ ಹಲವು ಸುತ್ತಿನ ಹೋರಾಟ ನಡೆಸಿದೆ.
ಮೇ ತಿಂಗಳ ಅಂತ್ಯದವರೆಗೆ ಹೇಮೆಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ರಾಜ್ಯ ವಿಧಾನ ಸಭೆಯಲ್ಲಿ ಹೇಳುವ ಮೂಲಕ ಹೇಮಾವತಿ ಜಲಾನಯನ ಪ್ರದೇಶದ ಜನರ ಬಗ್ಗೆ ತನಗೆ ಯಾವುದೇ ಕಾಳಜಿಯಿಲ್ಲ ಎನ್ನುವುದನ್ನು ನಿರೂಪಿಸಿದೆ. ಹೇಮೆಯಿಂದ ನೀರು ಬಿಡುವ ಬಗ್ಗೆ ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ರೈತರೊಂದಿಗೆ ಚರ್ಚಿಸುವುದಾಗಿ ಹೇಳಿ ಸಭೆಗೆ ಬರದೆ ಕದ್ದಾಡುತ್ತಿದ್ದಾರೆ. ಹೇಮಾವತಿ ಜಲಾಶಯದ ಮೂಲ ಯೋಜನೆಯಂತೆ ಜಲಾಶಯದಿಂದ ರಬಿ ಮತ್ತು ಖಾರೀಫ್ ಬೆಳೆಗೆ ನೀರು ಹರಿಸಬೇಕು.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸಿ ರಬಿ ಬೆಳೆಗೆ ನೀರು ಹರಿಸಲಾಗಿದೆ. ಆದರೆ ಖಾರೀಫ್ ಬೆಳೆಗೆ ನಿಯಮಾನುಸಾರ ನೀರು ಹರಿಸದಿದ್ದರೂ ನೀರು ಹರಿಸಿದಂತೆ ಕಾಗದದ ಮೇಲೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಪ್ರತಿ ಬೇಸಿಗೆಯಲ್ಲೂ ಹೇಮಾವತಿ ಬಯಲಿನ ರೈತರು ಹೋರಾಟ ಮಾಡಿಯೇ ನೀರು ಬಿಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಹೇಮೆಯ ನೀರಿನ ಬಗೆಗಿನ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯ ವಿರುದ್ದ ಮುಂದಿನ ಗುರುವಾರದಿಂದ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ನೀರಿಗಾಗಿ ರೈತ ಚಳುವಳಿ ಆರಂಭಿಸಲಿದ್ದಾರೆ ಎಂದು ಎಂ.ವಿ.ರಾಜೇಗೌಡ ಪ್ರಕಟಿಸಿದರು.
ಹೇಮಾವತಿ ಜಲಾಶಯವನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ನಿಯಂತ್ರಣದಿಂದ ತೆರವುಗೊಳಿಸಿ ಕಾಡಾ ವ್ಯಾಪ್ತಿಗೆ ತರಬೇಕು ಅಥವಾ ಹೇಮಾವತಿ ಜಲಾಶಯದ ನೀರಾವರಿ ಸಲಹಾ ಸಮಿತಿಗೆ ಜಲಾನಯನ ಪ್ರದೇಶದ ಪ್ರತಿ ತಾಲೂಕಿನಿಂದ ಒಬ್ಬೂಬ್ಬ ರೈತ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಎಂದು ಎಂ.ವಿ.ರಾಜೇಗೌಡ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಎಲ್.ಬಿ.ಜಗದೀಶ್, ನಾಗೇಗೌಡ, ಹೊನ್ನೇಗೌಡ, ಕೃಷ್ಣೇಗೌಡ, ಮರಡಹಳ್ಳಿ ರಾಮೇಗೌಡ, ಮುದ್ದುಕುಮಾರ್, ಚೇತನ್ ಸೇರಿದಂತೆ ಹಲವರಿದ್ದರು