ಕೆ.ಆರ್.ಪೇಟೆ– ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರು ಕರೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ, ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಯುವಜನರು ಹಾಗೂ ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಮುಂದೆ ಹೆಜ್ಜೆ ಹಾಕಿ ಗುರಿಸಾಧಿಸಲು ಏಕಾಗ್ರತೆ ಹಾಗೂ ಛಲದಿಂದ ಮುನ್ನುಗ್ಗಿ ಇತಿಹಾಸ ನಿರ್ಮಿಸಬೇಕು. ಇಂದಿನ ಸೋಲೇ ನಮ್ಮ ಮುಂದಿನ ಜೀವನಕ್ಕೆ ದಾರಿ ಮಾರ್ಗವಾಗುವುದರಿಂದ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆ ಮಾಡಬೇಕು. ಗುರುಹಿರಿಯರು ಹಾಗೂ ತಂದೆತಾಯಿಗಳನ್ನು ಗೌರವದಿಂದ ಕಂಡು ವಿನಯವಂತಿಕೆ ಹಾಗೂ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸುವ ಮೂಲಕ ಯಶಶ್ವಿ ವ್ಯಕ್ತಿಗಳಾಗಿ ಬದಲಾಗಬೇಕು ಎಂದು ಶ್ರೀನಿವಾಸ್ ಕಿವಿಮಾತು ಹೇಳಿದರು.

ಪದವಿ ವ್ಯಾಸಂಗವು ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಘಟ್ಟವಾಗುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅತ್ಯುನ್ನತವಾದ ಹುದ್ದೆಗಳನ್ನು ಅಲಂಕರಿಸಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಯುವಜನರು ಫೇಸ್ ಬುಕ್, ವ್ಯಾಟ್ಸಪ್ ನಲ್ಲಿ ಚಾಟಿಂಗ್ ಮಾಡಿಕೊಂಡು, ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳದೇ ಮೊಬೈಲ್ ಫೋನ್ ಪ್ರಪಂಚದಿಂದ ಹೊರಬಂದು ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕು ಎಂದು ಶ್ರೀನಿವಾಸ್ ಕಿವಿ ಮಾತು ಹೇಳಿದರು.

ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ವಿಠಲಾಪುರ ಜಯರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯ ಮಾರ್ಗದರ್ಶನ ನೀಡಿ ಜೀವನದಲ್ಲಿ ಸಮೃದ್ಧ ಸ್ವಾಭಿಮಾನಿ ಜೀವನ ನಡೆಸಲು ಮಾರ್ಗದರ್ಶನ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ಜಯರಾಮ್ ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಡಿ.ಬಿ.ಸತ್ಯ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
– ಶ್ರೀನಿವಾಸ್ ಆರ್.