ಕೆ.ಆರ್.ಪೇಟೆ-ಬೇಸಿಗೆ-ಶಿಬಿರಗಳಿಂದ-ಮಕ್ಕಳ-ಜ್ಞಾನ-ಮತ್ತು-ವ್ಯಕ್ತಿತ್ವ- ವಿಕಾಸಕ್ಕೆ-ಅವಕಾಶ-ಡಾ.ಜೆ.ಎನ್.ರಾಮಕೃಷ್ಣೇಗೌಡ

ಕೆ.ಆರ್.ಪೇಟೆ: ಬೇಸಿಗೆ ಶಿಬಿರಗಳಿಂದ ಮಕ್ಕಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಅವಕಾಶವಾಗುತ್ತದೆ ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ದಾಖಲೆ ಮಾಡಿ, ತಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಮಗಿರಿ ಶ್ರೀ ಕ್ಷೇತ್ರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಪವಿತ್ರ ಹೇಮಾವತಿ ನದಿ ತಪ್ಪಲಿನಲ್ಲಿರುವ ಹೇಮಗಿರಿ ಶ್ರೀ ಕ್ಷೇತ್ರದಲ್ಲಿರುವ ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ವತಿಯಿಂದ ಆಯೋಜಿಸಿರುವ ಒಂದು ತಿಂಗಳ ಕಾಲ ನಡೆಯುವ ಬೇಸಿಗೆ ಶಿಬಿರವನ್ನು ಮಕ್ಕಳೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾಲ್ಕು ಗೋಡೆಗಳ ನಡುವೆ ಬಂದಿಗಳಾಗಿ ಸದಾ ಕಾಲವೂ ಪುಸ್ತಕ, ಓದು ಎಂಬ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ, ಆಟವಾಡಿಕೊಂಡು ಸಂತೋಷದಿಂದ ಮುಕ್ತವಾಗಿ ಕಲಿಕೆಗೆ ಮುಂದಾಗಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಮಕ್ಕಳು ತಮ್ಮಲ್ಲಿ ಸುಪ್ತವಾಗಿ ರುವ ಪ್ರತಿಭೆಯನ್ನು ಹೊರ ಚೆಲ್ಲಲು ಶಿಬಿರವು ಸಹಕಾರಿಯಾಗಿರುವ ಕಾರಣ ಮಕ್ಕಳು ಮುಕ್ತವಾಗಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಈ ಶಿಬಿರದಲ್ಲಿ ಹೊರ ತರಲು ಪ್ರಯತ್ನಿಸಬೇಕು. ಮೊಗ್ಗಿನಂತಿರುವ ಮಕ್ಕಳ ಮನಸ್ಸು ಹೂವಿನಂತೆ ಅರಳುವಂತೆ ಮಾಡಲು ಬೇಸಿಗೆ ಶಿಬಿರವು ನೆರವಾಗಲಿದೆ. ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಚಾರ ಹಾಗೂ ಮಾರ್ಗದರ್ಶನವು ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ವಿಕಸನಗೊಳ್ಳುವಂತೆ ಮಾಡುತ್ತದೆ. ‌



ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಶಿಲ್ಪಿಗಳಾದ್ದರಿಂದ ಮಕ್ಕಳು ಹೊಸ ವಿಚಾರಗಳನ್ನು ಕಲಿತು, ಸಾಧನೆ ಮಾಡಲು ಸಹಾಯವಾಗಲಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ಭಕ್ತಿಯನ್ನು ತುಂಬುವ ವಿಚಾರಗಳು, ಪರೋಪಕಾರದ ಗುಣಗಳು, ತಂದೆ-ತಾಯಿಗಳಿಗೆ, ಗುರು-ಹಿರಿಯರೊಂದಿಗೆ ಯಾವ ರೀತಿ ಗೌರವ ಕೊಡಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ಏನು ಮಾಡಬೇಕು. ಗುಟಮಟ್ಟದ ಶಿಕ್ಷಣ ಪಡೆದುಕೊಳ್ಳಲು ಯಾವ ಯಾವ ಅಭ್ಯಾಸಗಳನ್ನು ಮಾಡಬೇಕು. ಸೇರಿದಂತೆ ಹಲವಾರು ಉಪಯುಕ್ತ ವಿಚಾರಗಳನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಬೇಸಿಗೆ ಶಿಬಿರವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಜ್ಞಾನ ವಿಕಾಸ ಮಾಡಿಕೊಳ್ಳುವ ಜೊತೆಗೆ ಗುರು ಹಿರಿಯರಿಗೆ ಕೀರ್ತಿ ತರುವಂತಹ ಸಾಧನೆ ಮಾಡಬೇಕು ಎಂದು ಡಾ.ಜೆ.ಎನ್.ರಾಮಕೃಷ್ಣೇಗೌಡ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆನಂದ್ ಸೇರಿದಂತೆ ಎಲ್ಲಾ ಶಿಕ್ಷಕರು ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?