ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗಡಿ ಗ್ರಾಮ ದಡಿಘಟ್ಟ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ದಡಿಘಟ್ಟದಮ್ಮ) ಅಮ್ಮನವರ ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಗ್ರಾಮದ ಹಿರಿಯ ಮುಖಂಡರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯದಿಂದ ಆವರಣದಿಂದ ಆರಂಭವಾದ ರಥೋತ್ಸವವು ನಿರ್ವಿಘ್ನವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸ್ವಸ್ಥಾನವನ್ನು ತಲುಪಿತು. ಭಕ್ತಾದಿಗಳು ರಥಕ್ಕೆ ಹಣ್ಣು-ಜವನ ಸಮರ್ಪಿಸಿ ಉಘೇ.. ಲಕ್ಷ್ಮೀದೇವಮ್ಮ ಉಘೇ.. ಉಘೇ.. ದಡಿಘಟ್ಟದಮ್ಮ ಉಘೇ.. ಉಘೇ.. ಎಂಬಿತ್ಯಾದಿ ಜಯಘೋಷಗಳನ್ನು ಮೊಳಗಿಸುತ್ತಾ ರಥವನ್ನು ಎಳೆದು ತಮ್ಮ ಭಕ್ತಿ ಭಾವ ಸಮರ್ಪಣೆ ಮಾಡಿದರು.

ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಮುಂತಾದ ದೇವರ ಜಾನಪದ ಶೈಲಿಯ ಪೂಜಾ ಕುಣಿತವು ರಥೋತ್ಸವದ ರಂಗನ್ನು ಹೆಚ್ಚಿಸಿತ್ತು. ದಡಿಘಟ್ಟ ಗ್ರಾಮದ ಹಿರಿಯ ಮುಖಂಡರು ಹಾಗೂ ಶ್ರೀ ಲಕ್ಷ್ಮೀದೇವಿ ಯುವಕರ ಸಂಘದ ಪದಾಧಿಕಾರಿಗಳು ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.
ರಥೋತ್ಸವದ ಅಂಗವಾಗಿ ಅನ್ನದಾನ ಕಾರ್ಯಕ್ರಮವನ್ನು ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದರು. ದಡಿಘಟ್ಟ, ಬೆಟ್ಟದಹಳ್ಳಿ, ಕುಂಭೇನಹಳ್ಳಿ, ಚಲ್ಯ, ಗಂಧನಹಳ್ಳಿ, ಜುಟ್ಟನಹಳ್ಳಿ, ಬ್ಯಾಡರಹಳ್ಳಿ ಕಿಕ್ಕೇರಿ, ಲಕ್ಷ್ಮೀಪುರ ಸೇರಿದಂತೆ ನಾನಾ ಭಾಗಗಳಿಂದ ಸುಮಾರು ೧೦ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾಧಿಗಳು ಶ್ರೀ ಲಕ್ಷ್ಮೀದೇವಿ ಅಮ್ಮನವರ ರಥೋತ್ಸವ, ಅನ್ನಧಾನ ಹಾಗೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.