ಕೆ.ಆರ್.ಪೇಟೆ: ತಾಲ್ಲೂಕಿನ ಬೀರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ 10ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 5 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಿ.ಆರ್.ಇಂದ್ರೇಶ್, ಎನ್.ಎನ್.ಜಗದೀಶ್, ಬಿ.ಪಿ.ಜವರಯ್ಯ, ಬಿ.ಎಸ್.ನಾಗರಾಜೇಗೌಡ, ಜವರಮ್ಮ ಭರ್ಜರಿ ಜಯ ಸಾಧಿಸಿದ್ದಾರೆ. ಇವರನ್ನು ತಾಲ್ಲೂಕು ಕೆಡಿಪಿ ಸದಸ್ಯ ಆಕಾಶ್, ವಕೀಲ ಬಿ.ಎನ್.ಜಗದೀಶ್ ಮತ್ತಿತರರು ಅಭಿನಂದಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾದ ಬಿ.ಎಲ್.ನಟೇಶ್, ಬಿ.ಎಸ್.ಕುಮಾರ, ಬಿ.ದೇವೇಗೌಡ, ಕುಮಾರ, ಜಯಮ್ಮ ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಕೆ. ಹೇಮಲತಾ, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಸತೀಶ್ ಕಾರ್ಯನಿರ್ವಹಣೆ ಮಾಡಿದರು.

ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಯುವ ಮುಖಂಡ ಆಕಾಶ್, ವಕೀಲ ಬಿ.ಎನ್.ಜಗದೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀರುವಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.
ನೂತನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಕೆಡಿಪಿ ಸದಸ್ಯ ಬೀರವಳ್ಳಿ ಆಕಾಶ್, ಸಂಘದ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ೫ಮಂದಿ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಗೆಲುವಿಗೆ ಕಾರಣ ಕರ್ತರಾದ ಸೊಸೈಟಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರಿಗೆ ಹಾಗೂ ಶೇರುದಾರ ಮತದಾರ ಬಂಧುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಈ ಗೆಲುವು ಮುಂದೆ ನಡೆಯುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಹೆಚ್ಚಿನ ಸಾಧನೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿರುವ ನಮ್ಮ ಪಕ್ಷದ ಇತರೆ 5 ಅಭ್ಯರ್ಥಿಗಳಿಗೆ ನಮ್ಮದೇ ಸರ್ಕಾರ ಇರುವ ಕಾರಣ ಬೇರೆ ಬೇರೆ ಸ್ಥಾನಮಾನ ಕೊಡಿಸಲಾಗುವುದು ಎಂದು ತಿಳಿಸಿದರು.
-ಶ್ರೀನಿವಾಸ್ ಆರ್.