ಕೆ.ಆರ್.ಪೇಟೆ: ತಾಲ್ಲೂಕಿನ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕೋರಂ ಅಭಾವ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆಶಾ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿದರು.
ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಹೇಮಂತ್ ಕುಮಾರ್, ಉಪಾಧ್ಯಕ್ಷ ಸ್ಥಾನ ಬಯಸಿ ಮೈತ್ರಿ ಪಕ್ಷದ ಎಸ್.ಎಂ.ರವಿ ನಾಮಪತ್ರ ಸಲ್ಲಿಸಿದ್ದರು.
ಅದೇ ಕಾಂಗ್ರೆಸ್- ರೈತ ಸಂಘದ ಮೈತ್ರಿ ಅಭ್ಯರ್ಥಿಯಾಗಿ ಮೋಹನ್ ಅಧ್ಯಕ್ಷ ಸ್ಥಾನಕ್ಕೆ, ಅನುಸೂಯ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು.

ಅಂತಿಮವಾಗಿ ಏ.03ರಂದು ಮಧ್ಯಾಹ್ನ 12ಗಂಟೆಗೆ ಮತದಾನಕ್ಕೆ ಸಂಘದ ಮೀಟಿಂಗ್ ಹಾಲ್ ನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಚುನಾವಣಾ ಪ್ರಕ್ರಿಯೆಗೆ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷ ಬೆಂಬಲಿತ ನಿರ್ದೇಶಕರಾದ ಹೇಮಂತಕುಮಾರ್, ಎಸ್.ಎಂ.ರವಿ, ಎಸ್.ಮೋಹನ್, ಕೃಷ್ಣೇಗೌಡ, ಲೋಕೇಶ್, ಹಾಗೂ ಶೋಭ ಹಾಜರಾಗಿದ್ದರು. ಆದರೆ ಕಾಂಗ್ರೆಸ್-ರೈತ ಸಂಘದ ಐವರು ನಿರ್ದೇಶಕರ ಪೈಕಿ ಯಾವುದೇ ಯಾರೋಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರಂ ಅಭಾವ ಸೃಷ್ಠಿಯಾಯಿತು. ಆಗ ಅನಿವಾರ್ಯವಾಗಿ ಚುನಾವಣಾಧಿಕಾರಿ ಚುನಾವಣೆಯನ್ನು ಮುಂದೂಡಿದರು. ಅಲ್ಲದೇ ಮುಂದಿನ ದಿನಾಂಕವನ್ನು ಸದ್ಯದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ಮುಖಂಡರ ಆಕ್ರೋಶ ಚುನಾವಣಾ ಪ್ರಕ್ರಿಯೆಯಲ್ಲಿ ಸೋಲಿನ ಹತಾಶೆಯಿಂದ ಕಾಂಗ್ರೆಸ್-ರೈತ ಸಂಘ ಬೆಂಬಲಿತ ಐವರೂ ನಿರ್ದೇಶಕರು ಗೈರು ಹಾಜರಾಗಿದ್ದಾರೆ. ಒಂದು ವೇಳೆ ಕೋರಂ ಸಿಕ್ಕಿದ್ದರೆ ನಮ್ಮ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಚುನಾವಣೆ ಮುಂದೂಡಿಕೆಯಿಂದ ಸಂಘಕ್ಕೆ ಸುಮಾರು 25ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದು ಹಾಲು ಉತ್ಪಾದಕರ ಹಣವಾಗಿದೆ. ಇದನ್ನು ವ್ಯರ್ಥ ಮಾಡಿರುವ ಕಾಂಗ್ರೆಸ್- ರೈತ ಸಂಘದವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಐ.ಗಿರೀಶ್ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ನಂಜಪ್ಪ, ಬಾಬು, ಸೋಮೇಶ್, ಎಸ್.ಕೆ.ಮಂಜೇಗೌಡ, ನವೀನ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.