ಕೆ.ಆರ್.ಪೇಟೆ-ಕನಕದಾಸ ಸಾಹಿತ್ಯ ಪರಿಷತ್ ಆರಂಭಿಸುವಂತೆ ಸರಕಾರವನ್ನು ಆಗ್ರಹಿಸಿದ ಚಿಂತಕಿ ಮಮತಾ ಚಂದ್ರಶೇಖರ್

ಕೆ.ಆರ್.ಪೇಟೆ-ಭಕ್ತ ಕನಕದಾಸರ ಕೀರ್ತನೆಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿವೆ ಇದಕ್ಕಾಗಿ ಕನಕದಾಸರ ಕೀರ್ತನೆಗಳನ್ನು ಬೆಳಕಿಗೆ ತರುವ ಅಗತ್ಯವಿದೆ.ಇದಕ್ಕಾಗಿ ಸರ್ಕಾರವು ಕನಕದಾಸ ಸಾಹಿತ್ಯ ಪರಿಷತ್ ಅನ್ನು ಆರಂಭಿಸಬೇಕು ಎಂದು ಉಪನ್ಯಾಸಕಿ ಹಾಗೂ ಚಿಂತಕಿ ಮಮತಾಚಂದ್ರಶೇಖರ್ ಆಗ್ರಹಿಸಿದರು.

ಅವರು ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದಲ್ಲಿರುವ ಶತಮಾನದ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸರ 537ನೇ ವರ್ಷದ ಜಯಂತೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿ ಕನಕದಾಸರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕನಕದಾಸರು ತಮ್ಮ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಕವಿ, ದಾರ್ಶನಿಕ ಸಂತ, ಸಮಾಜ ಸುಧಾರಕ ತತ್ವಜ್ಞಾನಿ ಆಗಿದ್ದಾರೆ.ಕನಕದಾಸರು ನಡೆಸಿದ ಜೀವನ ಆದರ್ಶಗಳು ನಮಗೆ ಪ್ರಸ್ತುತವಾಗಿವೆ. ನಾನು ಎನ್ನುವುದನ್ನು ಕಳೆದುಕೊಂಡವರು ಮಾತ್ರ ಮೋಕ್ಷಕ್ಕೆ ಹೋಗುತ್ತಾರೆ.ನಾನು ಎನ್ನುವುದು ಅಹಂ ಅಹಂಕಾರವನ್ನು ತ್ಯಜಿಸಿದವನು ಮಾತ್ರ ಉತ್ತಮ ಆಗಲು ಸಾಧ್ಯ. ಅಹಂಕಾರದಿoದ ಯಾರು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಸಾರಿದರು.

ಚಿಕ್ಕ ವಯಸ್ಸಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ ಕನಕದಾಸರು ತಮ್ಮ ಕೊನೆ ಉಸಿರು ಇರುವವರೆಗೆ ಸಂಗೀತ ಸಾಹಿತ್ಯ ಮುಂತಾದವುಗಳಲ್ಲಿ ತೊಡಗಿ ಕೊಂಡವರು. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಸರಳವಾದ ಭಾಷೆಯನ್ನು ಬಳಸಿ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ರಾಮಧಾನ್ಯ ಚರಿತ್ರೆಯಲ್ಲಿ ಬಡವರನ್ನು ಪ್ರತಿನಿಧಿಸುವ ರಾಗಿ ಮತ್ತು ಶ್ರೀಮಂತರನ್ನು ಪ್ರತಿನಿಧಿಸುವ ಭತ್ತದ ನಡುವಿನ ಸಂವಾದ ಅತ್ಯಂತ ಮನೋಜ್ನವಾಗಿ ಮೂಡಿಬಂದಿದೆ. ಕನಕದಾಸರ ತತ್ವ ಆದರ್ಶಗಳು ನಮಗೆ ಇಂದಿಗೂ ಅನುಕರಣೆಯವಾಗಿವೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ ಎನ್ನುವ ಅದ್ಭುತ ಸಂದೇಶವನ್ನು ಕನಕದಾಸರು ನಮಗೆ ನೀಡಿದ್ದಾರೆ. ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ಸರಿಯಲ್ಲ. ಮೊದಲು ಜಾತಿ ಮತ್ತು ಮೂಡನಂಬಿಕೆಗಳಿoದ ಹೊರಬಂದು ಕನಕದಾಸರನ್ನು ನೆನೆದಾಗ ಅದು ಅರ್ಥಪೂರ್ಣವಾಗಿ ಇರುತ್ತದೆ ಎಂದು ಮಮತಾ ಚಂದ್ರಶೇಖರ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಕೆಳವರ್ಗದಿಂದ ಬಂದ ಏಕೈಕ ದಾಸರು. ಸಮಾಜ ಸುಧಾರಕರು, ಸಂಗೀತಕಾರರಾಗಿದ್ದಾರೆ.ಮೋಹನ ತರಂಗಿಣಿ, ನಳಚರಿತ್ರೆ, ದಾಮಧಾನ್ಯ ಚರಿತೆ, ಹರಿಭಕ್ತಸಾರ, ನೃಸಿಂಹಸ್ತವ ಸೇರಿ ಸುಮಾರು 4ಸಾವಿರ ಕೀರ್ತನೆಗಳು ಅಥವಾ ಪಂದ್ಯಗಳನ್ನು ಬರೆದಿದ್ದಾರೆ. ಎಲ್ಲರೂ ಸಹ ಸಮಾಜ ಬದಲಾವಣೆಗೆ ಪೂರಕವಾಗಿ ರಚಿಸಿರುವ ಕಾವ್ಯಗಳಾಗಿವೆ ಎಂದು ತಿಳಿಸಿದರು.

ಈ 4ಸಾವಿರ ಪದ್ಯಗಳ ಸಾರವನ್ನು ಸಮಾಜಕ್ಕೆ ತಿಳಿಸಬೇಕಾದರೆ ಕನಕದಾಸರ ಸಾಹಿತ್ಯ ಅಕಾಡೆಮೀ ಅಥವಾ ಕನಕದಾಸ ಸಾಹಿತ್ಯ ಪರಿಷತ್ ಅನ್ನು ಆರಂಭಿಸುವ ಅಗತ್ಯವಿದೆ ಎಂದು ಪ್ರಧಾನ ಭಾಷಣಕಾರರಾದ ಮಮತಾಚಂದ್ರಶೇಖರ್ ಅವರು ಪ್ರತಿಪಾದಿಸಿದ್ದಾರೆ. ಇದನ್ನು ನಾನು ಸರ್ಕಾರದ ಶಾಸಕನಾಗಿ ಅನುಮೋದಿಸುತ್ತೇನೆ. ಕೂಡಲೇ ಸರ್ಕಾರವು ಕನಕದಾಸ ಜಯಂತಿ ಆಚರಣೆಗಿಂತ ಅವರ ಕಾವ್ಯಗಳ ಸಾರವನ್ನು ಜನತೆಗೆ ತಿಳಿಸಲು ಕೂಡಲೇ ಕನಕದಾಸ ಸಾಹಿತ್ಯ ಅಕಾಡೆಮೀ ಅಥವಾ ಪರಿಷತ್ ಅನ್ನು ಸ್ಥಾಪನೆ ಮಾಡಬೇಕು. ಜನರಿಗೆ ಕನಕದಾಸರ ಕೀರ್ತನೆಗಳ ಸಾರವು ತಿಳಿಯುವಂತಾಗಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಶಾಸಕರು ಸರ್ಕಾರಕ್ಕೆ ಮನವಿ ಮಾಡಿದರು.

ಸಮಾಜ ಸೇವಕರು ಹಾಗೂ ಆರ್.ಟಿ.ಓ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕನಕದಾಸರು ದಾಸ ಸಾಹಿತ್ಯದಲ್ಲಿ ಶ್ರೇಷ್ಠರಾಗಿದ್ದಾರೆ.12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರೇ 16ನೇ ಶತಮಾನದಲ್ಲಿ ಭಕ್ತ ಕನಕದಾಸರು ಹೋರಾಟ ನಡೆಸಿದರು.

ನಾವೆಲ್ಲರೂ ಅಂಬೇಡ್ಕರ್ ಹಾಗೂ ಕುವೆಂಪು ಅವರು ಹಾಕಿಕೊಟ್ಟ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿ ಸಾರೋಟಿನಲ್ಲಿ ಪ್ರವಾಸಿ ಮಂದಿರದಿoದ ಹೊರಟ ಕನಕದದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕರಾದ ಹೆಚ್.ಟಿ.ಮಂಜು ಚಾಲನೆ ನೀಡಿದರು.

ತಹಶೀಲ್ದಾರ್ ಡಾ.ಅಶೋಕ್, ಜಿ.ಪಂ.ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಕಾರ್ಯಕ್ರಮ ಕುರಿತು ಮಾತನಾಡಿದರು.

ಜಿ.ಪಂ.ಮಾಜಿ ಸದಸ್ಯರಾದ ಐಪನಹಳ್ಳಿ ನಾಗೇಂದ್ರಕುಮಾರ್, ರಾಂದಾಸ್, ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯಉಮೇಶ್, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಎಂ.ಜೆ.ಶಶಿಧರ್, ನಿರ್ದೇಶಕ ಪ್ರಸನ್ನಕುಮಾರ್, ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರಬಾಬು, ಸುಗುಣರಮೇಶ್, ಸುಜೇಂದ್ರಕುಮಾರ್, ಬಸ್ತಿರಂಗಪ್ಪ, ರಾಜಯ್ಯ, ಶಕುಂತಲಾ, ಜಿ.ಎ.ರಾಯಪ್ಪ, ಅಕ್ಕಿಹೆಬ್ಬಾಳು ದಿವಾಕರ್, ಲತಾಮುರುಳಿ, ಲೋಲಾಕ್ಷಿಜಗದೀಶ್, ಬಿಇಓ ತಿಮ್ಮೇಗೌಡ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ದಿವಾಕರ್, ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಬಿಸಿಎಂ ಅಧಿಕಾರಿ ಎಂ.ಎನ್.ವೆoಕಟೇಶ್, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ತಿಮ್ಮೇಗೌಡ, ರಾಜಸ್ವ ನಿರೀಕ್ಷಕ ಜ್ಞಾನೇಶ್, ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ, ಗ್ರಾಮ ಆಡಳಿತಾಧಿಕಾರಿ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

————-—–ಶ್ರೀನಿವಾ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?