ಕೆ.ಆರ್.ಪೇಟೆ,ಮೇ.13: ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕರಾದ ಸೊಳ್ಳೇಪುರ ಎಸ್.ಮಂಜಪ್ಪ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ವತಿಯಿಂದ ಸಂತಾಪ ಸೂಚಕ ಸಭೆ ನಡೆಸಿ ಮಂಜಪ್ಪ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತಾಲ್ಲೂಕಿನ ರಾಜಕೀಯ ಧುರೀಣರಾಗಿದ್ದ ಮಂಜಪ್ಪ ಅವರು ಅಕಾಲಿಕ ಮರಣ ಹೊಂದಿದ ಕಾರಣದಿಂದಾಗಿ ಅವರ ಗೌರವಾರ್ಥ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರು ಮತ್ತು ಸಿಬ್ಬಂಧಿಗಳು ಟಿ.ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಶ್ರದ್ದಾಂಜಲಿ ಅರ್ಪಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಸಂಸ್ಥೆಯ ನಿರ್ದೇಶಕರಾಗಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಭಿವೃದ್ದಿಗೆ ಮಂಜಪ್ಪ ನೀಡಿದ ಕೊಡುಗೆ ಮತ್ತು ಸಹಕಾರಗಳನ್ನು ಸ್ಮರಿಸಿದರು. ತಾಲೂಕಿನ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಮಂಜಪ್ಪ ಕಳಂಕ ರಹಿತ ರಾಜಕಾರಣಿಯಾಗಿದ್ದರು. ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಕಾಲೇಜು ಹಂತದಲ್ಲಿಯೇ ಮಾಜಿ ಸಚಿವರಾಗಿದ್ದ ಮಾಧಪ್ರಸಾದ್ ಅವರನ್ನೇ ಸೋಲಿಸಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ಮಂಜಪ್ಪ ಸಂಘಟನಾ ಚತುರರಾಗಿದ್ದರು.

ಹುಟ್ಟು- ಹೋರಾಟಗಾರರಾಗಿದ್ದು ಮೌಲ್ಯಯುತ ರಾಜಕಾರಣಕ್ಕೆ ಹೆಸರಾಗಿದ್ದರು. ತಮ್ಮ ಸರಳ ಗುಣ ಮತ್ತು ಮಿತ ಭಾಷಿಯಾಗಿದ್ದ ಮಂಜಪ್ಪ ಕ್ಷೇತ್ರದ ಅಭಿವೃದ್ಧಿ ಹಲವು ಪಕ್ಷಾತೀತವಾಗಿ ಎಲ್ಲಾ ಶಾಸಕರಿಗೆ ಮಾರ್ಗದರ್ಶಕರಾಗಿ ಸಲಹೆಗಳನ್ನು ನೀಡುತ್ತಾ, ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ಮಂಜಪ್ಪ ಅವರ ಅಕಾಲಿಕ ನಿಧನದಿಂದ ಸಹಕಾರ ಕ್ಷೇತ್ರ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ ಎಂದು ಬಿ.ಎಲ್.ದೇವರಾಜು ಅಭಿಪ್ರಾಯಪಟ್ಟರು.

ಸಭೆಯಲ್ಲಿ ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಎಸ್.ಆರ್.ನವೀನ್‌ಕುಮಾರ್, ಐಚನಹಳ್ಳಿ ಶಿವಣ್ಣ, ಟಿಎಪಿಸಿಎಂಎಸ್ ಕಾರ್ಯದರ್ಶಿ ಎಸ್.ಬೋರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಣ್ಣೇನಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಮತ್ತು ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥಯ ನೌಕರ ವೃಂದದವರು ಶ್ರದ್ದಾಂಜಲಿ ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೌನಾಚರಣೆಯ ಮೂಲಕ ಶಾಂತಿ ಕೋರಿದರು.
- ಶ್ರೀನಿವಾಸ್ ಆರ್.