ಕೆ.ಆರ್.ಪೇಟೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರವು ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದಿ ಪ್ರತಿಭಟನಾನಿರತ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರವನ್ನು ಒತ್ತಾಯ ಮಾಡಿದರು.
ಮಂಡ್ಯ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಹರೀಶ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ದಶರಥ ಪೂಜಾರಿ ಮತ್ತು ಇತರೆ ಪದಾಧಿಕಾರಿಗಳ ನೇತೃತ್ವದಲ್ಲಿ ಎರಡನೇ ದಿನವೂ ಸಹ ಕೈಗೆ ಕಪ್ಪು ಪಟ್ಟಿ ಧರಿಸಿ, ಮಹಾತ್ಮಾ ಗಾಂಧೀಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದರು.
ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ದಶರಥ ಪೂಜಾರಿ ಮಾತನಾಡಿ ಕಳೆದ ೩ತಿಂಗಳ ಹಿಂದೆ ಅಂದರೆ ದಿನಾಂಕ: 26-09-2024 ರಿಂದ 03-10-2024 ರವರೆಗೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಆದೇಶದಂತೆ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಅಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ದಿನಾಂಕ:03-10-2024 ರಂದು ನಮ್ಮ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು
. ಈ ಭರವಸೆ ಮೇರೆಗೆ ಅಂದು ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿತ್ತು. ಆದರೆ ಸರ್ಕಾರವು ಮೂರು ತಿಂಗಳು ಕಳೆದರೂ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ದಿನಾಂಕ: 10-02-2025 ರಿಂದ 2ನೇ ಹಂತದ ಅನಿರ್ಧಿಷ್ಠಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಈ ಭಾರಿ ಬರೀ ಮಾತಿನ ಭರವಸೆಗೆ ಮಣಿಯದೆ ಬೇಡಿಕೆಗಳನ್ನು ಕಡ್ಡಾಯವಾಗಿ ಈಡೇರಿಸುವವರೆಗೆ ಪ್ರತಿಭಟನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸುಮಾರು 21 ಮೊಬೈಲ್ ಹಾಗೂ ವೆಬ್ ತಂತ್ರಾಂಶಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಮೊಬೈಲ್, ಲ್ಯಾಪ್‌ಟಾಪ್ ನೀಡದೇ ಕಾರ್ಯನಿರ್ವಹಣೆ ಮಾಡುವುದಾದರೂ ಹೇಗೆ ಇದಕ್ಕೆ ಅಗತ್ಯ ಮೂಲ ಸೌಕರ್ಯವನ್ನು ಸರ್ಕಾರವು ನೀಡದೇ ಕೆಲಸದ ಒತ್ತಡ ಹಾಕುತ್ತಿದೆ. ಮೂಲ ಸೌಲಭ್ಯವನ್ನು ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದರು.
ನಮ್ಮ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹಿಂದೆ ಇದ್ದ ಅಂತರ ಜಿಲ್ಲಾ ವರ್ಗಾವಣೆಯನ್ನು ಬಂದ್ ಮಾಡಿರುವ ಕಾರಣ ನೌಕರರು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸವಾಗಿದ್ದು, ಪೋಷಕರು ಬೇರೆ ಜಿಲ್ಲೆಗಳಲ್ಲಿ ವಾಸವಿರುತ್ತಾರೆ. ಇದರಿಂದ ವಯೋಪೋಷಕರ ಪಾಲನೆ ಮಾಡಲು ಅವಕಾಶವಾಗುತ್ತಿಲ್ಲ. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಕೆ.ಸಿ.ಎಸ್.ಆರ್.ನಿಯಮ-16ಅನ್ನು ಮರುಸ್ಥಾಪನೆ ಮಾಡಿ ವರ್ಗಾವಣೆಗೆ ಅನುಕೂಲ ಮಾಡಿಕೊಡಬೇಕು. ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ ಅಥವಾ ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಬೇಕು.
ಜಾತಿ ಆದಾಯ ಪ್ರಮಾಣಪತ್ರ ವಿತರಣೆ ವಿಚಾರವಾಗಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಎಫ್.ಐ.ಆರ್ ದಾಖಲಿಸುವ ಕ್ರಮವನ್ನು ಕೈಬಿಡಬೇಕು. ತಪ್ಪು ಮಾಹಿತಿ ನೀಡಿಪ್ರಮಾಣ ಪತ್ರ ಪಡೆದ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ೫೦ವರ್ಷಗಳ ಹಿಂದೆ ಗ್ರಾಮ ಆಡಳಿತಾಧಿಕಾರಿಗಳ ವೃತ್ತವನ್ನು ಮರು ವಿಂಗಡಣೆ ಮಾಡಿ ಜನಸಂಖ್ಯೆಗೆ ಅನುಗುಣವನ್ನು ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕು.

ಒಂದು ತಿಂಗಳು ಸಮಯಾವಕಾಶ ನೀಡಿ ಮಾಡುತ್ತಿದ್ದ ಪೌತಿಖಾತೆ ಬದಲಾವಣೆಯನ್ನು ಒಂದು ವಾರದ ಮಿತಿಗೆ ಇಳಿಸಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಒಂದು ತಿಂಗಳ ಅವಧಿಗೆ ಮತ್ತೆ ಹೆಚ್ಚಿಸಬೇಕು. ಹೀಗೆ ಅನೇಕ ಬೇಡಿಕೆಗಳನ್ನು ಸರ್ಕಾರವು ಕೂಡಲೇ ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಸುನಿಲ್ ಗಾಣಿಗೇರ್ ಮಾತನಾಡಿ ರೈತರು ಮತ್ತು ಜನಸಾಮಾನ್ಯರ ಪರವಾಗಿ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತವಾಗಿ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರ, ತಾಲ್ಲೂಕು ಗೌರವ ಸಲಹೆಗಾರ ಸುಧಾಕರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಸೋಮಾಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಗಾಣೀಗೇರ್, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಸಾವಿತ್ರಿ, ಕಾರ್ಯದರ್ಶಿ ಬಿ.ಹೊನ್ನೇಶ್, ಖಜಾಂಚಿ ಕಾವ್ಯಗೌಡ, ನಿರ್ದೇಶಕರಾದ ಮಧು, ಶ್ವೇತ, ಪೂಜಾ, ಕಾಂತೇಶ್, ಮಮತಾಜಯರಾಮೇಗೌಡ ಸೇರಿದಂತೆ ತಾಲೂಕಿನ ಎಲ್ಲಾ ವೃತ್ತಗಳ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
-ಶ್ರೀನಿವಾಸ, ಕೆ.ಆರ್.ಪೇಟೆ