ಕೆ.ಆರ್.ಪೇಟೆ: ಪುರಾಣ ಪ್ರಸಿದ್ಧ ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಕೇರಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಏ.26ರಂದು ಶನಿವಾರ ಸಂಜೆ 5 ಗಂಟೆಗೆ ಪಟ್ಟಣದಲ್ಲಿ ನಡೆಯಲಿದೆ.
ಏ.25ರಂದು ಶುಕ್ರವಾರ ಪಟ್ಟಣದ ಎಲ್ಲಾ ಸಮುದಾಯದವರಿಂದ ಸೇರಿ ಕನ್ನಂಕಾಡಿ ಉತ್ಸವಗಳು, ಹಸಿರು ಬಂಡಿ ಉತ್ಸವ, ಬಾಯಿಬೀಗ, ಹಾಗೂ ದೊಡ್ಡಕೇರಮ್ಮನವರ ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ.26ರಂದು ಶನಿವಾರ ಸಂಜೆ 5ಗಂಟೆಗೆ ಪಟ್ಟಣದ ಈಶ್ವರ ದೇವಾಲಯದ ಮುಂಭಾಗದಿ0ದ ರಥೋತ್ಸವ ಆರಂಭವಾಗಿ, ಮುಕ್ಕಟ್ಟೆ ಚೌಕದ ಮೂಲಕ ಸಾಗಿ, ದುರ್ಗಾಭವನ್ ವೃತ್ತ- ಶ್ರವಣಬೆಳಗೊಳ ರಸ್ತೆಯ ಮೂಲಕ ಮತ್ತೆ ಸ್ವಸ್ಥಾನ ತಲುಪಲಿದೆ.

ಭಾನುವಾರ ಪಟ್ಟಣದ ಹೊರವಲಯದಲ್ಲಿರುವ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡಕೇರಮ್ಮ ಮತ್ತು ಚಿಕ್ಕಮ್ಮ ದೇವಾಲಯದ ಬಳಿ ಸಿಡಿಯಾಟ ಮತ್ತು ಜಾತ್ರಾ ಮಹೋತ್ಸವ ನಡೆಯುತ್ತದೆ. ಸೋಮವಾರ ಪಟ್ಟಣದ ಹೃದಯ ಭಾಗದಲ್ಲಿ ಓಕುಳಿ ಗುಂಡಿ ತೆಗೆದು ಗ್ರಾಮದವರೆಲ್ಲರೂ ಒಟ್ಟಾಗಿ ಸೇರಿ ಬಣ್ಣ ಬಣ್ಣ ನೀರಿನಿಂದ ಮಿಂದು ಓಕುಳಿ ಆಟದಲ್ಲಿ ಭಾಗವಹಿಸುತ್ತಾರೆ.
ಸೋಮವಾರ ರಾತ್ರಿ 8ಗಂಟೆಗೆ ಶ್ರೀ ದೊಡ್ಡಕೇರಮ್ಮ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ಮಾರುಗುಡಿ ಸರ್ಕಲ್‌ನಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಇರುತ್ತದೆ. ಶ್ರೀ ದೊಡ್ಡಕೇರಮ್ಮ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಇಡೀ ಕೆ.ಆರ್.ಪೇಟೆ ಪಟ್ಟಣವು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ನವ ವಧುವಿನಂತೆ ಕಂಗೊಳಿಸುತ್ತಿದೆ.

ರಾಜ್ಯದ ನಾನಾ ಭಾಗಗಳಲ್ಲಿ ಇರುವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಹಬ್ಬ ಆಚರಣಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಆರ್.