ಕೆ.ಆರ್.ಪೇಟೆ: ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ನಾಣ್ಣುಡಿಯಂತೆ ಯಾರು ಕಾಯಕದಲ್ಲಿ ನಿರತರಾಗಿರುತ್ತಾರೋ ಅವರು ಸಮಾಜದಲ್ಲಿ ಸಾಧನೆ ಮಾಡುತ್ತಾರೆ. ಇಂತಹ ಟೀಕೆಗಳನ್ನು ಕಡೆಗಣಿಸಿ ಸಾಧನೆಯಲ್ಲಿ ನಿರತರಾದವರು ಮಾತ್ರ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಲು ಸಾಧ್ಯ. ಕಲ್ಲಿನ ಬೋರೇಯಂತಿದ್ದ ಆದಿಚುಂಚನಗರಿ ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ತೆರೆಮರೆಯ ಸೇವೆ ಅನನ್ಯವಾದುದು. ಇಂತಹ ನಾಡಿನ ಕೆಲವೇ ಕೆಲವು ತೆರೆಮರೆಯ ಸಾಧಕರಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ಒಬ್ಬರು ಎಂದು ನಾಡಿನ ಖ್ಯಾತ ಸಾಹಿತಿ ಹಾಗೂ ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ರಾಯಲ್ ಕಂಫರ್ಟ್ ಹೋಟೆಲ್ ಸಭಾಂಗಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಭಕ್ತರು, ಮುಖಂಡರು, ವಿವಿಧ ನಾಗರೀಕ ಸಂಘಟನೆಗಳ ಪ್ರಮುಖರು ಆದಿ ಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರು ಶ್ರೀಮಠಕ್ಕೆ ಸಲ್ಲಿಸಿದ 50 ವರ್ಷಗಳ ಸಾರ್ಥಕ ಸೇವೆಯನ್ನು ಗುರುತಿಸಿ ನೀಡಿದ “ಸಾರ್ಥಕ ಸೇವಾರತ್ನ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆದಿ ಚುಂಚನಗಿರಿ ಮಠದ ಕಾರ್ಯ ಕ್ಷೇತ್ರವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಕೀರ್ತಿ ಭೈರವೈಖ್ಯ ಡಾ.ಬಾಲಗಂಗಾಧರನಾಥ ಶ್ರೀಗಳಿಗೆ ಸೇರಿದ್ದು. ಬಾಲಗಂಗಾಧರನಾಥ ಶ್ರೀಗಳ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿ ಶ್ರೀ ಮಠದ ಯಶಸ್ಸಿಗೆ ತೆರೆಯ ಹಿಂದೆ ಶ್ರಮಿಸಿದ ಶ್ರಮಿಕ ಡಾ.ಜೆ.ಎನ್.ರಾಮಕೃಷ್ಣೇಗೌಡ ಎಂದು ಬಣ್ಣಿಸಿದ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮತ್ತು ಶ್ರೀಮಠದ ಸಂಬಂಧಗಳನ್ನು ತಿಳಿಸಿದರು. ನಾನು ಮತ್ತು ಜೆ.ಎನ್.ರಾಮಕೃಷ್ಣೇಗೌಡ ಸಹಪಾಠಿಗಳು.

ಅವರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಬಾಲಗಂಗಾಧರನಾಥ ಶ್ರೀಗಳ ಸೇವಾ ಕೈಕರ್ಯಗಳಿಗೆ ಹೆಗಲುಕೊಟ್ಟರು. ಬಾಲಗಂಗಾಧರನಾಥ ಶ್ರೀಗಳನ್ನು ಕುರಿತ “ಕಾಲಾತೀತ” ಕೃತಿಗೆ ನಾನು ಸಂಪಾದಕನಾದಾಗ ಕೆಲವರು ಶ್ರೀಗಳ ಬಳಿ ನನ್ನ ವಿರುದ್ದ ಹೇಳಿದ್ದರು. ಆಗ ಶ್ರೀಗಳು ಇತತರ ಮಾತಿಗೆ ಬೆಲೆಕೊಡದೆ ಯಾರು ಟೀಕೆ ಮಾಡುತ್ತಾರೋ ಅವರೇ ನಿಜವಾಗಿ ನಮ್ಮ ಯಶಸ್ಸವನ್ನು ಬಯಸುವವರು ಎಂದು ಹೇಳಿದ್ದರಂತೆ. ಇಂದು ಸಮಾಜ ಬದಲಾಗಿದೆ. ಸಾಧಕರನ್ನು ಮೆಚ್ಚಿ ಪ್ರೋತ್ಸಾಹಿಸುವವರ ಸಂಖ್ಯೆ ಕ್ಷೀಣಿಸಿದೆ. ಅಹಂಕಾರ ಮತ್ತು ಅಸೂಹೆಯಿಂದ ಸಮಾಜ ತುಂಬಿ ತುಳುಕುತ್ತಿದೆ.
ಸಾಧಕರು ಕಾಲಾತೀತತರು. ಅವರು ತಮ್ಮ ಬದುಕಿನ ಘಟ್ಟದಲ್ಲಿ ಮಾಡಿದ ಸಾಧನೆಗಳು ಕಾಲಾತೀತವಾಗಿ ಮಾನವ ಕುಲಕ್ಕೆ ಬೆಳಕಾಗಿ ಮುನ್ನಡೆಸುತ್ತವೆ. ಇದಕ್ಕೆ ಬಾಲಗಂಗಾಧರನಾಥ ಶ್ರೀಗಳು ಅತ್ಯುತ್ತಮ ನಿದರ್ಶನ ಎಂದ ನಾಗತಿಹಳ್ಳಿ ಚಂದ್ರಶೇಖರ್ ಬಾಲಗಂಗಾಧರನಾಥ ಶ್ರೀಗಳ ಮಾನಸ ಪುತ್ರರೆಂದೇ ಬಿಂಬಿಸಲ್ಪಟ್ಟಿರುವ ರಾಮಕೃಷ್ಣೇಗೌಡರು ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾಗಿ ಮಠದ ಶಿಕ್ಷಣ ಸೇವೆಗಳನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ್ದಾರೆ. ಕೆ.ಆರ್.ಪೇಟೆಯ ಜನತೆ ನೀಡುತ್ತಿರುವ ಸಾಧಕ ರತ್ನ ಪ್ರಶಸ್ತಿ ಅವರಿಗೆ ಸಲ್ಲುತ್ತಿರುವುದು ಸಾರ್ಥಕವಾಗಿದೆ ಎಂದರು.

ತಾಲೂಕಿನ ಹೇಮಗಿರಿ ಮತ್ತು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ಮಕ್ಕಳು ರಚಿಸಿ ಹೊರತಂದಿರುವ ಚಿಣ್ಣರ ಶುಭಾಶಯಗಳ ಕುಂಛ ಮತ್ತು ಕನ್ನಡಿಗರಿಗೊಂದು ನುಡಿ ನಮನ ಕೃತಿಗಳನ್ನು ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಹಿರಿಯ ಚಲನ ಚಿತ್ರ ನಟಿ ವಿನಯ ಪ್ರಸಾದ್ ಬಿಡುಗಡೆ ಮಾಡಿ ಆದಿ ಚುಂಚನಗಿರಿ ಮಠದಲ್ಲಿ 50 ವರ್ಷಗಳ ಕಾಲ ಸಾರ್ಥ ಸೇವೆ ಸಲ್ಲಿಸಿ ಮುನ್ನಡೆಯುತ್ತಿರುವ ಡಾ.ಜೆ.ಎನ್.ರಾಮಕೃಷ್ಣೇಗೌಡರ ಸೇವೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು, ಟಿ.ಎ.ಪಿ.ಸಿಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ ಮುಲ್ ನಿರ್ದೇಶಕರುಗಳಾದ ಡಾಲು ರವಿ, ಎಂ.ಬಿ.ಹರೀಶ್, ಪುರಸಭಾ ಸದಸ್ಯರಾದ ಕೆ.ಬಿ.ಮಹೇಶ್, ಬಸ್ ಸಂತೋಷ್, ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ನಾಗರೀಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಕ್ಷ ಸೋಮಶೇಖರ್, ಬಿಜಿಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರುಗಳಾದ ಬಿ.ನಂಜಪ್ಪ, ಎಸ್.ಸಿ.ವಿಜಯಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ಸುಶ್ಮಿತ ಮತ್ತು ಶಿವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ರಂಜಿಸಿದರು. ಕಾರ್ಯಕ್ರಮದ ಪ್ರಸ್ತುತತೆ ಕುರಿತು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ನಿರೂಪಿಸಿದರು.