ಕೆ.ಆರ್.ಪೇಟೆ;ಹಾಲು ದೇವರ ಪ್ರಸಾದಕ್ಕೆ ಬಳಕೆಯಾಗುವ ಕಾರಣ ಯಾವುದೇ ಕಾರಣಕ್ಕೂ ಯಾವುದೇ ಕಲಬೆರಕೆ ಮಾಡದೇ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಿರಿಯ ನಿರ್ದೇಶಕ ಡಾಲು ರವಿ ಹೈನುಗಾರರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಹೊಡಕೆಶೆಟ್ಟಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕರ್ನಾಟಕ ನಂದಿನಿ ಹಾಲು ಇಡೀ ದೇಶದಲ್ಲಿಯೇ ಅತ್ಯಂತ ಶ್ರೇಷ್ಠ ಗುಣಮಟ್ಟ ಹೊಂದಿದೆ. ಇದರಿಂದಾಗಿ ತಿರುಪತಿ ಶ್ರೀ ಕ್ಷೇತ್ರದಲ್ಲಿ ತಯಾರಿಸುವ ಲಡ್ಡು ಪ್ರಸಾದಕ್ಕೆ ನಮ್ಮ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲು ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿ ಟ್ರಸ್ಟ್ ನಿರ್ಧಾರ ಮಾಡಿರುವುದೇ ಸಾಕ್ಷಿಯಾಗಿದೆ. ಇಂತಹ ಹಿರಿಮೆಯನ್ನು ನಾವುಗಳು ಸದಾಕಾಲಕ್ಕೂ ಉಳಿಸಿಕೊಂಡು ಹೋಗಬೇಕು.ಇದು ನೀವು ಹಾಲನ್ನು ಕಲಬೆರಕೆ ಮಾಡದೇ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಹಕಾರ ಸಂಘಗಳು ಗ್ರಾಮೀಣ ಜನರ ಜೀವನಾಡಿಯಾಗಿವೆ ಹಾಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆ ಸಬಾರದು.ಒಂದು ಸಂಘದಲ್ಲಿ ರಾಜಕೀಯ ಬೆರೆತರೆ ಆ ಸಹಕಾರ ಸಂಘಗಳು ನಷ್ಟ ಹಾದಿಯನ್ನು ತುಳಿಯುತ್ತವೆ.
ಹೈನುಗಾರಿಕೆಯು ರೈತರನ್ನು ಕೈಹಿಡಿದು ಮುನ್ನಡೆಸುತ್ತಿದೆ.ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದರೆ ಅಂತಹ ಸಂದರ್ಭದಲ್ಲಿ ಹೈನುಗಾರಿಕೆಯು ರೈತರನ್ನು ಸಂಕಷ್ಟದಿoದ ಪಾರು ಮಾಡಿದೆ. ಇಂತಹ ರೈತರ ಪ್ರಮುಖ ಉಪಕಸುಬು ಆಗಿರುವ ಹೈನುಗಾರಿಕೆಯನ್ನು ಉಳಿಸಲು ಸಹಕಾರ ಸಂಘಗಳಲ್ಲಿ ರಾಜಕೀಯ ತರಬಾರದು.ದೇಶದಲ್ಲಿ ಹೈನುಗಾರಿಕೆ ಪಿತಾಮಹ ಡಾ.ವಿ.ಕುರಿಯನ್ ಅವರು ಹೈನುಗಾರಿಕೆ ಉದ್ಯಮವನ್ನು ಸಹಕಾರ ಸಂಘಗಳ ಮೂಲಕ ಆರಂಭಿಸಿದ ಮೇಲೆ ರೈತರು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಾಗಿದೆ. ಇದಕ್ಕಾಗಿ ಹಾಲು ಉತ್ಪಾದಕರು ತಮ್ಮ ಗ್ರಾಮದ ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಡಾಲು ರವಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಡೇರಿ ಕಟ್ಟಡದ ಪಶು ಆಹಾರ ಗೋದಾಮು ಘಟಕವನ್ನು ಉದ್ಘಾಟನೆ ಮಾಡಿದರು.
ಸಂಘದ ಅಧ್ಯಕ್ಷೆ ರೇಖಾ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮನ್ಮುಲ್ ಮಾರ್ಗದ ವಿಸ್ತರಣಾಧಿಕಾರಿ ಹೆಚ್.ಎನ್.ರಾಘವೇಂದ್ರ ಸಂಘದ ಆಡಿಟ್ ವರದಿಯನ್ನು ಮಂಡಿಸಿದರು. ಹಾಗೂ 2024-25ನೇ ಸಾಲಿನ ಬಜೆಟ್ ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸಾಕಮ್ಮ ನಂಜೇಗೌಡ, ನಿರ್ದೇಶಕರಾದ ಸಾವಿತ್ರಮ್ಮ ಸ್ವತಂತ್ರೇಗೌಡ, ಭಾರತಿಯೋಗೇಗೌಡ, ರತ್ನಮ್ಮರಾಮೇಗೌಡ, ನಿರ್ಮಲರಂಗರಾಜು, ಪವಿತ್ರರಂಗೇಗೌಡ, ಶಿವಮ್ಮಸುರೇಶ್, ಭಾಗ್ಯಬೋರಲಿಂಗೇಗೌಡ, ಸುಕನ್ಯ ಶ್ರೀನಿವಾಸ್, ತಾರಾಮಣಿಮಂಜುನಾಥ್, ಗ್ರಾ.ಪಂ.ಸದಸ್ಯರಾದ ಸುಲಲೋಕೇಶ್, ಹೆಚ್.ವಿ.ನಾಗರಾಜೇಗೌಡ, ರತ್ನಮ್ಮ, ಸಂಘದ ಕಾರ್ಯದರ್ಶಿ ಸಂಗೀತಾನಾಗೇಂದ್ರ, ಹಾಲು ಪರೀಕ್ಷಕಿ ಶಶಿಕಲಾಚಂದ್ರೇಗೌಡ, ಸುಮಪ್ರತಾಪ್ ಸೇರಿದಂತೆ ಸಂಘದ ಶೇರುದಾರರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
——–ಶ್ರೀನಿವಾಸ್ ಕೆ ಆರ್ ಪೇಟೆ