ಕೆ.ಆರ್.ಪೇಟೆ-ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿಯ ಬಳಿ ಹೇಮಾವತಿ,ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಮಲೈಮಹದೇಶ್ವರ ದೇವಾಲಯದಲ್ಲಿ ಕಡೆಯ ಕಾರ್ತಿಕ ಸೋಮವಾರದ ಅಂಗವಾಗಿ ಮಹದೇಶ್ವರರ ಶಿಲಾ ಮೂರ್ತಿಗೆ ವಿಶೇಷ ಪೂಜೆ ಹಾಗೂ ಹುಲಿವಾಹನ ಉತ್ಸವವು ಸಡಗರ ಸಂಭ್ರಮದಿoದ ಅದ್ದೂರಿಯಾಗಿ ನಡೆಸಲಾಯಿತು.
ಈ ಸ್ಥಳ ಬಾಲಕ ಮಹದೇಶ್ವರರು ಪವಾಡ ನಡೆಸಿ ಕಪ್ಪಡಿ ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳಿದರೆಂಬ ಐತಿಹ್ಯವಿರುವ ಕಾರಣಕ್ಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ರಾಜ್ಯದ ಮಾಜಿ ಸಚಿವ ಡಾ.ನಾರಾಯಣಗೌಡ ಹುಲಿ ವಾಹನೋತ್ಸವದ ಅಡ್ಡ ಪಲ್ಲಕಿಯನ್ನು ಹೊತ್ತು ಹರಕೆ ತೀರಿಸಿ ನೆರೆದಿದ್ದ ಭಕ್ತ ಸಮೂಹವನ್ನು ಉದ್ಧೇಶಿಸಿ ಮಾತನಾಡಿ, ಮಲೈ ಮಹದೇಶ್ವರರು ಪವಾಡ ನಡೆಸಿರುವ ಈ ಪವಿತ್ರ ತ್ರಿವೇಣಿ ಸಂಗಮದ ನೆಲಕ್ಕೆ ಅಪಾರವಾದ ಶಕ್ತಿಯಿದೆ.ಬೇಡಿ ಬಂದ ಇಷ್ಟಾರ್ಥಗಳು ನೆರವೇರಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೂರೂ ಜೀವಂತ ನದಿಗಳಾದ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಒಂದಾಗಿ ಸೇರುವ ಈ ಪವಿತ್ರ ಕ್ಷೇತ್ರದ ವಿಶಾಲವಾದ ಜಲ ಸಾಗರವನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದಾಗಿದೆ. ಸಂಗಮ ಕ್ಷೇತ್ರದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪದ ನಿರ್ಮಾಣ ಸೇರಿದಂತೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಾರಾಯಣ ಗೌಡ ಹೇಳಿದರು.
ಪ್ರವಾಸೋಧ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತ ಅವರು ಹುಲಿವಾಹನೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೇ ಪವಿತ್ರ ತ್ರಿವೇಣಿ ಸಂಗಮದ ಖ್ಯಾತಿಯು ನಾಡಿನಾಧ್ಯಂತ ಹಬ್ಬಬೇಕು. ಸಂಗಮ ಕ್ಷೇತ್ರವು ಪವಿತ್ರ ತೀರ್ಥಕ್ಷೇತ್ರವಾಗಿ ಅಭಿವೃದ್ಧಿ ಹೊಂದಬೇಕು ಈ ದಿಕ್ಕಿನಲ್ಲಿ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ತಾವು ಮಾಡುವುದಾಗಿ ಭರವಸೆ ನೀಡಿದರು.
ಐಪಿಎಸ್ ಅಧಿಕಾರಿ ಪ್ರಕಾಶ್‌ಗೌಡ, ಸಮಾಜ ಸೇವಕರಾದ ಮಲ್ಲಿಕಾರ್ಜುನ್, ಪ್ರಥಮ ದರ್ಜೆ ಗುತ್ತಿಗೆದಾರ ಜಯಕೃಷ್ಣೇಗೌಡ, ಮನು ಶರತ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ. ಅಂಚಿ ಸಣ್ಣಸ್ವಾಮಿಗೌಡ, ಬೆಳತೂರು ಪುಟ್ಟೇಗೌಡ, ಶೀಳನೆರೆ ಅಂಬರೀಶ್, ಕಟ್ಟೆ ಕ್ಯಾತನಹಳ್ಳಿ ಪಾಪಣ್ಣ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಹುಲಿವಾಹನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಹುಲಿವಾಹನ ಉತ್ಸವದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಕಜ್ಜಾಯ, ಮೊಸರನ್ನ, ತರಕಾರಿ ಭಾತ್ ಪ್ರಸಾದ ವಿತರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ.ವಿನಯ್‌ಕುಮಾರ್ ಹಿರೇಮಠ್ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
————–———-ಶ್ರೀನಿವಾಸ್ ಕೆ ಆರ್ ಪೇಟೆ