ಕೆ.ಆರ್.ಪೇಟೆ-ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರದಲ್ಲಿ ಕೊಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಗುಣಮಟ್ಟದಿಂದ ಎಲ್ಲಾ ಮೂಲ ಸೌಲಭ್ಯಗಳನ್ನೊಳಗೊಂಡ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ತಿಂಗಳುಗಳೇ ಕಳೆಯುತ್ತಾ ಬಂದಿದ್ದರು ಉದ್ಘಾಟನೆಗೊಳ್ಳದೆ ಸಾರ್ವಜನಿಕರ ಹಣ ಹಾಗೆಯೆ ಪೋಲಾಗಿ ಹೋಗುವ ಆತಂಕ ಕಾಡುತ್ತಿದೆ.
ಈ ನೂತನ ಬಸ್ ನಿಲ್ದಾಣಕ್ಕೆ ಅಂದಿನ ಸಚಿವ ಕೆ.ಸಿ. ನಾರಾಯಣಗೌಡರು ಶಂಕು ಸ್ಥಾಪನೆ ನೆರವೇರಿಸಿದ್ದರು.ಕಾಮಗಾರಿ ಆರಂಭದಲ್ಲಿ ವೇಗದಿಂದ ನಡೆದಿತ್ತು ನಂತರ ಕುಂಟುತ್ತಾ ಸಾಗಿದ ಕಾಮಗಾರಿ ಸದ್ಯ ಸಂಪೂರ್ಣ ಮುಕ್ತಾಯಗೊಂಡಿದ್ದರು ಸಂಸ್ಥೆಯ ಅಧಿಕಾರಿಗಳು ಬಸ್ ನಿಲ್ದಾಣವನ್ನು ಸಾರ್ವಜನಿಕಾಕರಣ ಗೊಳಿಸಲು ಮುಂದಾಗದೆ ಇರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಿತ್ಯವೂ ಕೃಷ್ಣರಾಜಪೇಟೆ ನಗರಕ್ಕೆ ಹಾಗೂ ಬೇರ್ಯ ಗ್ರಾಮಕ್ಕೆ ಸಾವಿರಾರು ಪ್ರಯಾಣಿಕರು ಅಕ್ಕಿಹೆಬ್ಬಾಳು ಗ್ರಾಮದಿಂದ ಪ್ರಯಾಣಿಸುತ್ತಾರೆ.ಈ ಬಸ್ ನಿಲ್ದಾಣ ಉದ್ಘಾಟನೆಯಾಗದ ಕಾರಣ ಅವರು ಬಸ್ಸಿಗೆ ಹತ್ತಲು ಸರಿಯಾದ ಸ್ಥಳ ಅವಕಾಶವಿಲ್ಲದೆ ಬಿಸಿಲು ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಪುರಾತನ ಪ್ರಸಿದ್ಧ ದೇವಸ್ಥಾನಗಳನ್ನು ನೋಡಲು ಅನೇಕ ಭಕ್ತಾದಿಗಳು ಆಗಮಿಸುತ್ತಾರೆ.ಅವರೆಲ್ಲರೂ ಬಸ್ಸಿಗಾಗಿ ಕಾಯಲು ಸರಿಯಾದ ಜಾಗವಿಲ್ಲದೆ. ರಸ್ತೆ ಬದಿಯಲ್ಲಿರುವ ಅಂಗಡಿಗಳ ನೆರಳಿನಲ್ಲಿ ನಿಂತುಕೊಳ್ಳುತ್ತಾರೆ.
ಸಾರಿಗೆ ಸಂಸ್ಥೆ ಹಾಗೂ ಶಾಸಕ ಹೆಚ್ ಟಿ ಮಂಜುರವರು ಗಮನ ಹರಿಸಿ ಇನ್ನಾದರೂ ಈ ಬಸ್ ನಿಲ್ದಾಣ ಉದ್ಘಾಟಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
——————ಶ್ರೀನಿವಾಸ್ ಕೆ ಆರ್ ಪೇಟೆ