ಕೆ.ಆರ್.ಪೇಟೆ-ಪರಿಶಿಷ್ಟ-ಜಾತಿಯ-ಎಡಗೈ-ಜನಾಂಗಕ್ಕೆ- ಒಳಮೀಸಲಾತಿಯನ್ನು-ಕರ್ನಾಟಕ-ಸರ್ಕಾರವು-ತಕ್ಷಣ- ಜಾರಿಗೊಳಿಸಬೇಕು-ಒತ್ತಾಯ

ಕೆ.ಆರ್.ಪೇಟೆ: ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯ ಎಡಗೈ ಜನಾಂಗಕ್ಕೆ ಒಳಮೀಸಲಾತಿಯನ್ನು ಕರ್ನಾಟಕ ಸರ್ಕಾರವು ತಕ್ಷಣ ಜಾರಿಗೊಳಿಸಬೇಕು. ಹಾಗೂ ಒಳ ಮೀಸಲಾತಿ ಜಾರಿಗೊಳಿಸುವ ತನಕ ಯಾವುದೇ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯಬಾರದು ಎಂದು ಮಂಡ್ಯ ಜಿಲ್ಲಾ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟವು ರಾಜ್ಯ ಸರ್ಕಾರನ್ನು ಒತ್ತಾಯ ಮಾಡಿದೆ.


ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್ ಅವರು ಪರಿಶಿಷ್ಟ ಜಾತಿಯಲ್ಲಿ ಈವರೆಗೆ ಸರ್ಕಾರಿ ಉದ್ಯೋಗ, ರಾಜಕೀಯ, ಸಾಮಾಜಿಕ, ಆರ್ಥಿಕ ಅವಕಾಶ ವಂಚಿಕ ವಂಚಿತವಾಗಿರುವ ಎಡಗೈ ಸಮುದಾಯ ಅಂದರೆ ಮಾದಿಗ, ಆದಿ ದ್ರಾವಿಡ, ಆದಿ ಜಾಂಬವ ಇತರೆ ಸಮುದಾಯಗಳಿಗೆ ಒಳಮೀಸಲಾತಿ ನೀಡಬಹುದು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯತಾವತ್ ಜಾರಿಗೊಳಿಸಬೇಕು.

ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಯಾವ ರೀತಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂಬುದರ ಬಗ್ಗೆ ಸರ್ಕಾರವು ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದೆ. ಈ ಆಯೋಗವು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರು ತಮ್ಮ ಮೂಲ ಜಾತಿಯ ಮಾಹಿತಿಯನ್ನು ಅಂದರೆ ಬಲಗೈ(ಹೊಲೆಯ) ಅಥವಾ ಎಡಗೈ(ಮಾದಿಗ) ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಿ ನೌಕರರಿಗೆ ಮನವಿ ಮಾಡಿದೆ. ಕೂಡಲೇ ರಾಜ್ಯ ಸರ್ಕಾರವು ಈ ಬಗ್ಗೆ ಪ.ಜಾತಿ ಸರ್ಕಾರಿ ನೌಕರರಿಂದ ಮಾಹಿತಿ ಸಂಗ್ರಹಿಸಿ ಒಳಮೀಸಲಾತಿ ಜಾರಿಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿಗೊಳಿಸುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು.


ಕಳೆದ 30ವರ್ಷಗಳ ಹೋರಾಟದ ಪ್ರತಿಫಲವಾಗಿ ಒಳಮೀಸಲಾತಿ ನೀಡಬಹುದೆಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಅವಕಾಶ ವಂಚಿತ ನಮ್ಮ ಮಾದಿಗ ಸಮುದಾಯ ಹೃದಯತುಂಬಿ ಸ್ವಾಗತಿಸುತ್ತೇವೆ. ಅದರಂತೆ ರಾಜ್ಯದ ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವ ನಂಬಿಕೆ, ಪೂರ್ಣ ಭರವಸೆ ಮತ್ತು ಧೃಢ ವಿಶ್ವಾಸವನ್ನು ನಮ್ಮ ಮಾದಿಗ ಸಮುದಾಯವು ಹೊಂದಿದೆ. ಹಾಗಾಗಿ ನಮ್ಮ ಸಮುದಾಯದ ನಂಬಿಕೆಯನ್ನು ಹುಸಿಗೊಳಿಸದೇ ಆದಷ್ಟು ಬೇಗ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಎನ್.ಆರ್.ಚಂದ್ರಶೇಖರ್ ಒತ್ತಾಯ ಮಾಡಿದರು.

ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ಮಾದಿಗ ಜಾತಿ ದೃಢೀಕರಣ ಪತ್ರವನ್ನು ತಾಲ್ಲೂಕು ಕಚೇರಿಗಳಲ್ಲಿ ನೀಡುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಮಾದಿಗ ಸಮುದಾಯವು ಡಾ.ಬಾಬು ಜಗಜೀವನರಾಂ ಚರ್ಮಕೈಗರಿಕಾ ಅಭಿವೃದ್ಧಿ ನಿಗಮ, ಆದಿ ಜಾಂಬವ ನಿಗಮದಿಂದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್.ಚಂದ್ರಶೇಖರ್ ಒತ್ತಾಯ ಮಾಡಿದರು.


ಸಭೆಯಲ್ಲಿ ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ಕಾರ್ಯದರ್ಶಿ ಕಾಂತರಾಜು, ಪದಾಧಿಕಾರಿಗಳಾದ ರಾಯಸಮುದ್ರ ಆರ್.ಟಿ.ಉಮೇಶ್, ಗೋಪಿನಾಥ್, ಆರ್.ಸುಧಾಕರ್, ಹೆಚ್.ಆರ್.ರಮೇಶ್, ನಿವೃತ್ತ ಸೈನಿಕ ಜಯರಾಂ, ಗಂಗೇನಹಳ್ಳಿ ಕೃಷ್ಣಪ್ಪ, ಹೊಸಕೋಟೆ ಮಂಜು, ನಂಜುಂಡಸ್ವಾಮಿ, ತೇಗನಹಳ್ಳಿ ಸುರೇಶ್, ಕೂಡಲಕುಪ್ಪೆ ಗೋವಿಂದರಾಜು, ಯಗಚಗುಪ್ಪೆ ಕದಿರಯ್ಯ, ಆಲೇನಹಳ್ಳಿ ರಾಜು ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀನಿವಾಸ, ಕೆ.ಆರ್.ಪೇಟೆ

Leave a Reply

Your email address will not be published. Required fields are marked *

× How can I help you?