ಕೆ.ಆರ್.ಪೇಟೆ-ದೇಶದ ನ್ಯಾಯಾಂಗ ಕ್ಷೇತ್ರದ ಪಾವಿತ್ರತೆಗೆ ದಕ್ಕೆ ಯಾಗದಂತೆ ವಕೀಲರು ಕಾರ್ಯನಿರ್ವಹಿಸಬೇಕು-ನ್ಯಾ,ಸುಧೀರ್ ಕರೆ

ಕೆ.ಆರ್.ಪೇಟೆ-ನ್ಯಾಯವನ್ನು ಅರಸಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಯುವ ವಕೀಲರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಬದ್ಧತೆಯಿಂದ ವಾದ ಮಂಡಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸುಧೀರ್ ಕರೆ ನೀಡಿದರು.

ಅವರು ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ವಕೀಲರ ಸಂಘದ ನೂತನ ಅಧ್ಯಕ್ಷ ನಾಗೇಗೌಡ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ದೇಶದ ನ್ಯಾಯಾಂಗ ಕ್ಷೇತ್ರವು ಇಂದಿಗೂ ತನ್ನ ಪಾವಿತ್ರತೆಯನ್ನು ಉಳಿಸಿಕೊಂಡಿದ್ದು, ನ್ಯಾಯಾoಗ ವ್ಯವಸ್ಥೆಯ ಬಗ್ಗೆ ಶ್ರೀ ಸಮಾನ್ಯರು ಅಪಾರವಾದ ನಂಬಿಕೆ ಹೊಂದಿದ್ದಾರೆ. ಜನರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆಯಾಗದಂತೆ ಯುವ ವಕೀಲರು ಎಚ್ಚರ ವಹಿಸಿ ಬದ್ಧತೆಯಿಂದ ವಾದ ಮಂಡಿಸುವ ಜೊತೆಗೆ ಶೀಘ್ರ ನ್ಯಾಯದಾನಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದ ಅವರು ಕಾನೂನು ಪುಸ್ತಕಗಳನ್ನು ಶ್ರದ್ಧಾ ಭಕ್ತಿಯಿಂದ ಚೆನ್ನಾಗಿ ಓದಿಕೊಂಡು ಕೇಸಿನ ಆಳಕ್ಕೆ ಇಳಿದು ವಾದ ಮಂಡಿಸಿ ನೊಂದ ಜನರಿಗೆ ನ್ಯಾಯ ಕೊಡಿಸಿಕೊಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ, ವಕೀಲರಿಗೆ ಕಾನೂನು ಪುಸ್ತಕಗಳೇ ಪವಿತ್ರವಾದ ರಾಮಾಯಣ, ಮಹಾಭಾರತ ಗ್ರಂಥಗಳಿದ್ದoತೆ ಆದ್ದರಿಂದ ವಕೀಲರು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ವಾದ ಮಾಡಿ ನ್ಯಾಯಕ್ಕೆ ಜಯವನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ಹೇಳಿದರು.

ಅಪರ ಸಿವಿಲ್ ನ್ಯಾಯಾಧಿಶರಾದ ಶಕುಂತಲಾ ಮಾತನಾಡಿ, ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ನಡುವಿನಲ್ಲಿಯೇ ಜೀವನ ನಡೆಸಬೇಕಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ,ಯಾರು ಕಾನೂನನ್ನು ಗೌರವಿಸುತ್ತಾರೋ ಅಂತಹವರನ್ನು ಕಾನೂನು ಕೂಡಾ ಗೌರವಿಸುತ್ತದೆ ಎಂಬ ಸತ್ಯ ಅರಿತು ಕಾನೂನನ್ನು ಗೌರವಿಸಿ ವ್ಯಾಜ್ಯಗಳಿಂದ ಮುಕ್ತಾರಾಗಿ ನೆಮ್ಮದಿಯ ಬದುಕು ನಡೆಸಬೇಕು ಎಂದು ತಿಳಿಸಿದರು.

ಅಪರ ಸಿವಿಲ್ ನ್ಯಾಯಾಧಿಶರಾದ ಅರ್ಪಿತಾ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ವಕೀಲರು ಪ್ರಮುಖ ಆಧಾರ ಸ್ಥಂಭವಿದ್ದoತೆ. ಆದ್ದರಿಂದ ವಕೀಲರು ನ್ಯಾಯಾoಗ ವ್ಯವಸ್ಥೆಯ ಗೌರವ ಹೆಚ್ಚಿಸುವ ರೀತಿಯಲ್ಲಿ ವಾದ ಮಂಡಿಸಿ ಕೇಸುಗಳಿಗೆ ಜೀವ ತುಂಬಿ ನ್ಯಾಯಕ್ಕೆ ಜಯವನ್ನು ತಂದುಕೊಡಲು ಮುಂದಾಗಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಕಾರ್ಯದರ್ಶಿ ಎಸ್.ಜೆ.ಮಂಜೇಗೌಡ ಹಿರಿಯ ವಕೀಲರಾದ ಎನ್.ಆರ್.ರವಿಶಂಕರ್, ಬಿ.ಎಲ್.ದೇವರಾಜು, ಜಿ.ಆರ್. ಅನಂತರಾಮಯ್ಯ,ಹೆಚ್.ರವಿಮ ಆರ್.ಕೆ.ರಾಜೇಗೌಡ,ಇತರರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂಧರ್ಭದಲ್ಲಿ ಹಲವು ಹಿರಿಯ ವಕೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.

——————ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?