ಕೆ.ಆರ್ ಪೇಟೆ-ಮಕ್ಕಳಲ್ಲಿನ ಮೂಡನಂಬಿಕೆಗಳು ಕಂದಾಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಜ್ಞಾನ ವಿಚಾರಗೋಷ್ಠಿ,ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯಂತಹ ಕಾರ್ಯಕ್ರಮಗಳು ಪೂರಕವಾಗಿ ಕೆಲಸ ಮಾಡಲಿವೆ ಎಂದು ತಾಲೂಕು ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಚ್ ಕೆ ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಗತಿ ಇಂಗ್ಲೀಷ್ ಶಾಲೆಯ ಆವರಣದಲ್ಲಿ 2024 -25ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿಜ್ಞಾನ ವಿಚಾರಗೋಷ್ಠಿ ,ವಿಜ್ಞಾನ ವಸ್ತು ಪ್ರದರ್ಶನ,ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಸಲುವಾಗಿ ವಿಜ್ಞಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆಯಬೇಕು.ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಹಾಯವಾಗುತ್ತದೆ.ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ವಿಶ್ಲೇಷಣಾತ್ಮಕ ಪ್ರವೃತ್ತಿ ಜಾಗ್ರತಗೊಳ್ಳುತ್ತದೆ.ಅರಳುತ್ತಿರುವ ಪ್ರತಿಭಾನ್ವಿತ ವಿಜ್ಞಾನಿಗಳಿಗೆ ವಿಚಾರ ವಿನಿಮಯಕ್ಕೆ ಇಂತಹ ವೇದಿಕೆಗಳು ಅನುಕೂಲಕರವಾಗಿವೆ.ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುವುದರಿಂದ ಮಕ್ಕಳ ಚಿಂತನ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನೀವೃತ್ತ ಪ್ರಾಂಶುಪಾಲ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ ಶಾಲಾ ಶಿಕ್ಷಣ ಇಲಾಖೆ ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವುದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬಹುದು.ವೈಜ್ಞಾನಿಕ ಮನೋಭಾವನೆಯನ್ನು ರೂಡಿಸಬಹುದು.ಮಕ್ಕಳಲ್ಲಿರುವ ಅಂಧಕಾರ, ಅನುಮಾನಗಳಿಗೆ ಸೂಕ್ತ ಉತ್ತರಗಳನ್ನು ಕೊಡಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಶಾಲಾ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ , ತಾಲೂಕು ಸಂಪನ್ಮೂಲ ಕೇಂದ್ರ ಮತ್ತು ಪ್ರಗತಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಚಂದ್ರ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್,ಶಿಕ್ಷಣ ಸಂಯೋಜಕರಾದ ಆರ್. ಎಂ.ನವೀನ್ ಕುಮಾರ್ , ಬಿ.ಕೆ ಹರೀಶ್, ಕೃಷ್ಣನಾಯಕ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮೋಹನ್, ಚಂದ್ರಣ್ಣ, ಜ್ಞಾನೇಶ್ ಹಾಗೂ ಪ್ರಗತಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೌಷ್ಟಿಕ ಆಹಾರ ತಜ್ಞ ಎಂ.ಕೆ ಮೋನಿಕಾ, ಶಿಕ್ಷಕರಾದ ಗೌತಮಿ, ಮಾನಸ, ಪವಿತ್ರ, ಹಷೀಣಿ ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಆಶ್ಚರ್ಯ ಮತ್ತು ಶ್ರೀನಿಧಿ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮ ಸಂಯೋಜಕರಾದ ಎ.ಆರ್ ನವೀನ್ ಕುಮಾರ್ ಸ್ವಾಗತಿಸಿದರು.ಮುಖ್ಯ ಶಿಕ್ಷಕ ಗೋಪಾಲಕೃಷ್ಣ ವಂದಿಸಿದರು.
————————--ಶ್ರೀನಿವಾಸ್ ಕೆ ಆರ್ ಪೇಟೆ